ವಿಷಯಕ್ಕೆ ಹೋಗು

ಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೆಹಲಿಯ ಕೆಂಪುಕೋಟೆ

ಕೋಟೆಯು ರಕ್ಷಣಾವರಣವಿರುವ ಪ್ರದೇಶ. ದಿಬ್ಬ, ಗುಡ್ಡಗಳ ಅಗ್ರಭಾಗಗಳಲ್ಲಿ ಕಟ್ಟುವುದು ವಾಡಿಕೆ. ಯುದ್ಧಸನ್ನಿವೇಶಗಳಲ್ಲಿ ಇಂಥ ಆಯಕಟ್ಟಿನ ರಚನೆ ಒದಗಿಸುವ ಸೌಕರ್ಯಗಳು ಎರಡು: ಎತ್ತರ ಸ್ಥಳದಲ್ಲಿ ಇರುವುದರಿಂದ ಶತ್ರುವಿನ ವಿರುದ್ಧ ಸಹಜವಾಗಿ ಒದಗುವ ರಕ್ಷಣೆ, ಸುತ್ತಲೂ ವ್ಯಾಪಿಸಿರುವ ವಿಸ್ತಾರ ತಗ್ಗುಪ್ರದೇಶದ ಮೇಲೆ ಲಭಿಸುವ ಪ್ರಭುತ್ವ. ಆಧುನಿಕ ನೆಲ ಕಾದಾಟದಲ್ಲಿ ಸಹ ಕೋಟೆಯ ಮಹತ್ತ್ವ ಕಡಿಮೆ ಆಗಿಲ್ಲ. ಮುಖ್ಯವಾಗಿ ಕೋಟೆ ಯುದ್ಧಗತಿಯ ನಿಯಂತ್ರಣ ಕೇಂದ್ರವಾಗಿ ಯುದ್ಧವ್ಯವಸ್ಥೆಯ ನರಕೇಂದ್ರವಾಗಿ ಪ್ರಾಮುಖ್ಯ ಪಡೆದಿದೆ.

ಕೋಟೆಯ ರಚನಾಕ್ರಮ ನಿವೇಶನದ ಏರುತಗ್ಗುಗಳು, ಸಮಭೂಮಿ, ಪರ್ವತ ಪ್ರದೇಶ ಮುಂತಾದ ಗುಣಲಕ್ಷಣಗಳನ್ನು ಅನುಸರಿಸುತ್ತದೆ. ಕೋಟೆ ಕೊತ್ತಲಗಳಲ್ಲಿ ಶಾಶ್ವತ ಮತ್ತು ಹಂಗಾಮಿ ರಚನೆಗಳೆಂದು ಎರಡು ವಿಧಾನಗಳಿವೆ. ದೇಶದ ಗಡಿನಾಡು, ಪುರದುರ್ಗ, ರೈಲುಸಂಧಿ, ಅಸ್ತ್ರಶಾಲೆ, ಪರ್ವತಕಣಿವೆ, ಸಮುದ್ರತೀರ, ವಾಣಿಜ್ಯಕ್ಷೇತ್ರ, ಮುಂತಾದವುಗಳ ರಕ್ಷಣೆಗೆ ಅಣಿಮಾಡಿದ ಕೋಟೆಕೊತ್ತಲಗಳು ಸ್ಥಿರರಚನೆ. ಈ ಕಟ್ಟಡಗಳಿಗೆ ಯಥೇಚ್ಛ ಕಾಲಾವಧಿಯೂ ಕಟ್ಟಡ ಸಾಮಗ್ರ್ರಿಗಳೂ ಅಗತ್ಯ. ಹೀಗಾಗಿ ಅವನ್ನು ಶಾಂತಿಕಾಲದಲ್ಲಿ ನಿರ್ಮಿಸುತ್ತಾರೆ. ಯುದ್ಧರಂಗದಲ್ಲಿ ಆತ್ಮರಕ್ಷಣೆಗಾಗಿಯೂ ಶತ್ರುಗಳ ಆಕ್ರಮಣದ ನಿವಾರಣೆಗಳಿಗಾಗಿಯೂ ಸೈನಿಕರು ತಮ್ಮ ಬಳಿ ಇರುವ ಕೊಡಲಿ, ಗುದ್ದಲಿ, ಮುಂತಾದ ಆಯುಧಗಳಿಂದಲೂ ಸುತ್ತಮುತ್ತಣ ಪ್ರದೇಶಗಳಲ್ಲಿ ಸಿಕ್ಕುವ ಸಾಮಗ್ರಿಗಳಿಂದಲೂ ತರಾತುರಿಯಲ್ಲಿ ವ್ಯವಸ್ಥಾಪಿಸುವ ರಚನೆಗಳು ತಾತ್ಕಾಲಿಕ ಸಾಧನಗಳು.

ಪಟ್ಟಣಗಳನ್ನೂ ವ್ಯಾಪಾರಕ್ಷೇತ್ರಗಳ ಸಂಪತ್ತನ್ನೂ ರಕ್ಷಿಸುವ ಎತ್ತರದ ಕೋಟೆ ಗೋಡೆಗಳು ಬಹು ಪ್ರಾಚೀನಕಾಲದಿಂದಲೂ ಬಳಕೆಯಲ್ಲಿ ಬಂದಿವೆ. ನಿನೆವ ಮತ್ತು ಬ್ಯಾಬಿಲೋನಿಯಗಳ ರಕ್ಷಣೆಗೋಡೆಗಳು ಯುದ್ಧಸಮಯದಲ್ಲಿ ಇಡೀ ದೇಶದ ನಿವಾಸಿಗಳು, ಅವರ ಕುರಿಹಿಂಡುಗಳು ದನಕರುಗಳು, ಮನೆಸಾಮಾನುಗಳಿಗೆ ಆಶ್ರಯ ನೀಡುತ್ತಿದ್ದುವು. ಕ್ರಿ.ಪೂ.2,000ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆಯೇ ಕಟ್ಟಿದ್ದ ನಿನೆವದ ಕೋಟೆಗೋಡೆಗಳ ಎತ್ತರ 150' ದಪ್ಪ 30' ಸುತ್ತಳತೆ 50 ಮೈಲಿ. ಅದರ ಮೇಲೆ 1,500 ರಕ್ಷಣ ಗೋಪುರಗಳಿದ್ದವು. ಕ್ರಿ.ಪೂ.600ರಲ್ಲಿ ಪೂರ್ವ ಭೂಮಧ್ಯ ಸಮುದ್ರದ ಜನಾಂಗದವರು ಬಿಸಿಲಿನಲ್ಲಿ ಒಣಗಿಸಿದ ಮಣ್ಣು ಇಟ್ಟಿಗೆ ಗೋಡೆಗಳಿಂದ ತಮ್ಮ ಪಟ್ಟಣಗಳನ್ನು ರಕ್ಷಿಸಿದ್ದರು. ಮಂಗೋಲಿಯದ ದಾಳಿಕಾರರನ್ನು ತಡೆಗಟ್ಟಲು ಚೀನೀಯರು ಕಟ್ಟಿದ ಬೃಹದಾಕಾರದ ಗೋಡೆ ಕ್ರಿ.ಪೂ.221ರಲ್ಲಿ ಆರಂಭಿಸಿ ಮುಗಿಯಲು ಹತ್ತು ವರ್ಷಕಾಲ ಹಿಡಿಯಿತು. ಅದು ಪರ್ವತಶ್ರೇಣಿ ಶಿಖರಗಳ ಸಾಲುಗಳನ್ನು ಅನುಸರಿಸಿ ಆಳವಾದ ಕಣಿವೆಗಳನ್ನು ಹಾಯ್ದು 2,000 ಮೈಲಿಗಳಿಗಿಂತಲೂ ಹೆಚ್ಚು ಉದ್ದಕ್ಕೆ ಚಾಚಿದೆ. ಅದರ ಎತ್ತರ 15'-20', ಅಗಲ ಬುಡದಲ್ಲಿ 25', ಮೇಲೆ 15'-20'. ಆರುಮಂದಿ ಅಶ್ವಾರೋಹಿಗಳು ಜೋಡಿಯಲ್ಲಿ ಸವಾರಿ ಮಾಡಲು ಸಾಧ್ಯವಾಗುವಷ್ಟು ಅಗಲವಾದ ದಾರಿ ಕಟ್ಟೆಯ ಮೇಲಿದೆ. ದಿಡ್ಡಿ ಗೋಡೆಗಳ ರಕ್ಷಣೆ ಉಂಟು. ಗೋಡೆಯ ಮೇಲೆ ಮುಂದಕ್ಕೆ ಚಾಚಿಕೊಂಡಿದ್ದ 40' ಎತ್ತರ, 40' ಚಚ್ಚೌಕದ 25,000 ಸ್ತೂಪಗಳೂ ಪ್ರತಿಯೊಂದರಲ್ಲೂ ದಾಳಿಕಾರರ ಮೇಲೆ ಬಿಲ್ಲಿನಿಂದ ಅಸ್ತ್ರಗಳನ್ನು ಹಾರಿಸಲು ತಕ್ಕ ಕಿಂಡಿಗಳೂ ಇದ್ದವು. ಸಾವಿರಾರು ಸ್ತೂಪಗಳು ಇಂದಿಗೂ ಉಳಿದುಕೊಂಡಿವೆ. ಗೋಡೆಯ ಹೊರಗೂ ಬೆಟ್ಟಗಳ ಮೇಲ್ಭಾಗದಲ್ಲೂ ಕಣಿವೆಗಳ ಮೇಲೂ ಅನೇಕ ಪಹರೆಗೋಪುರಗಳಿವೆ. ಇವನ್ನೂ ದೊಡ್ಡ ಸ್ತೂಪಗಳನ್ನೂ ಹಗಲು ಹೊಗೆ, ಬಾವುಟಗಳಿಂದಲೂ ರಾತ್ರಿ ಬೆಂಕಿಜ್ವಾಲೆ, ದೀಪಗಳಿಂದಲೂ ಅಪಾಯಗಳನ್ನು ಸಂಕೇತಮಾಡಿ ಸೂಚಿಸಲು ಉಪಯೋಗಿಸುತ್ತಿದ್ದನು. ದಾಳಿಕಾರರು ಬರುವುದನ್ನು ಕೂಡಲೆ ಸೂಚನೆಕೊಟ್ಟು ಗಡಿನಾಡಿನ ಯಾವ ಭಾಗದಲ್ಲೂ ಬೇಕಾದ ಹೆಚ್ಚು ಸೇನಾಬಲವನ್ನು ತರಿಸಲು ಅವಕಾಶವಿತ್ತು.

ರೋಮ್ ಚಕ್ರಾಧಿಪತ್ಯದ ರಕ್ಷಣೆಗೆ ರ್ಹೈನ್ ಮತ್ತು ಡಾನ್ಯೂಬ್ ನದಿಗಳ ಸಾಲಿನಲ್ಲಿ ಇಡೀ ಗಡಿನಾಡನ್ನು ಆವರಿಸಿದ್ದ ರಾಕ್ಷಸ ಗೋಡೆ ಇತಿಹಾಸ ಪ್ರಸಿದ್ಧವಾಗಿತ್ತು. ಮರುಭೂಮಿಗಳಲ್ಲೂ ವಿಂಗಡವಾದ ಕೋಟೆಗಳಿದ್ದುವು. ಮುಖ್ಯ ಸ್ಥಳಗಳಲ್ಲಿ ಬಲಪಡಿಸಿದ್ದ ಸೈನಿಕಪಾಳ್ಯಗಳು ಕಾಲಾಂತರದಲ್ಲಿ ಕೋಲೋನ್, ಸ್ಟ್ರಾಸ್‍ಬರ್ಗ್ ಮುಂತಾದ ಭಾರಿ ಪಟ್ಟಣಗಳಾಗಿ ಬೆಳೆದು ರಕ್ಷಣೆ ಗೋಡೆಗಳಿಂದ ಅವೃತವಾಗಿದ್ದುವು. ಬಿಜಾóಂಟಿನ್ ದೇಶದ ಸೈನಿಕರು ರೋಮಕರಂತೆ ಡಾನ್ಯೂಬ್ ನದಿಯ ಗಡಿಗಳಲ್ಲಿ ರಕ್ಷಣೆ ಕೋಟೆಗಳ ಶ್ರೇಣಿಗಳನ್ನು ಕಟ್ಟಿ ತಮ್ಮ ಪಾಳ್ಯಗಳನ್ನು ಸ್ಥಾಪಿಸಿದ್ದರು. ಈ ಠಾಣೆಗಳು ಬಾಲ್ಕನ್ ಪ್ರಾಂತ್ಯದ ಗೋಡೆಯಿಂದ ಆವೃತವಾಗಿದ್ದ ಊರುಗಳು, ಕೋಟೆ ಮನೆಗಳೊಡನೆ ರಕ್ಷಣಾ ವ್ಯವಸ್ಥೆಯಲ್ಲಿದ್ದುವು. ರೋಮಕರು ಕೋಟೆ ನಿರ್ಮಾಣ ತಂತ್ರದಲ್ಲಿ ಪ್ರವೀಣರಾಗಿದ್ದರು. ಇಟ್ಟಿಗೆ ಕಲ್ಲುಗಳಿಂದ ಕಟ್ಟಿದ ಎತ್ತರ, ದಪ್ಪವಾದ ಗೋಡೆಗಳು, ಅವುಗಳ ಮೇಲೆ ರಕ್ಷಣ ಸೈನ್ಯಗಳು ಧಾರಾಳವಾಗಿ ಓಡಾಡುತ್ತ ತಮ್ಮ ಆಯುಧಗಳನ್ನು ಉಪಯೋಗಿಸಲು ತಕ್ಕಷ್ಟು ವಿಶಾಲವಾದ ಕಟ್ಟೆ, ಗೋಡೆಯ ಉದ್ದಕ್ಕೂ ಅಲ್ಲಲ್ಲಿ ಗೋಪುರಗಳು, ಗೋಡೆಯ ಸುತ್ತಲೂ ಅಗಲ, ಆಳದ ನೀರು ತುಂಬಿದ ಕಂದಕಗಳು, ಅವನ್ನು ಬಲಪಡಿಸಲು ಸುತ್ತುಗಟ್ಟಿದ್ದ ಚೂಪಾದ ಗೂಟಗಳ ದಸಿಬೇಲಿಗಳು, ಗೋಪುರಗಳ ಪಕ್ಕದಿಂದ ಕೆಳಗಿನ ಶತ್ರುಸೈನ್ಯದ ಮೇಲೆ ಬೆಂಕಿ ಉರಿಯುವ ವಸ್ತುಗಳನ್ನು ಎಸೆಯಲು ಸೌಕರ್ಯ, ಶತ್ರುಗಳು ಹಲ್ಲೆಮಾಡಿದರೆ ದುರ್ಗರಕ್ಷಕರಿಗೆ ಆಶ್ರಯ, ಪಟ್ಟಣವನ್ನೆಲ್ಲ ದೃಷ್ಟಪಥದಲ್ಲಿರುವಂತೆ ಎತ್ತರವಾಗಿ ಕಟ್ಟಿದ ಸಿಟಡೆಲ್ ಎಂಬ ಪಹರೆದುರ್ಗ, ನದಿಯ ಮೇಲಿನ ಸೇತುವೆಯ ರಕ್ಷಣೆಗೆ ಆಚೆ ಕಡೆ ಸೇತುದುರ್ಗ-ಇವೆಲ್ಲ ರಚಿತವಾಗಿದ್ದವು. ಅಷ್ಟು ದಪ್ಪ ಮತ್ತು ಎತ್ತರದ ಗೋಡೆಗಳನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ಕಟ್ಟಿದರೆ ವಿಪರೀತ ಖರ್ಚಾಗುವುದರಿಂದ ಎರಡು ಸಮಾಂತರ ಗೋಡೆಗಳನ್ನು ಬೇರೆಬೇರೆಯಾಗಿ 15'-20' ದೂರದಲ್ಲಿ ಕಟ್ಟಿ ಮಧ್ಯೆ ಮಣ್ಣು, ಕಲ್ಲು, ಇಟ್ಟಿಗೆಗಳ ಒಡ್ಡೊಡ್ಡ ಹೆಂಟೆ, ಗುಂಡುಗಳನ್ನು ಭರ್ತಿಗಾಗಿ ತುಂಬುತ್ತಿದ್ದರು. ಶತ್ರುಗಳ ಅಂಬು, ಬಾಣಗಳಿಂದ ರಕ್ಷಣೆ ಪಡೆಯಲು ಹೊರ ಗೋಡೆಯ ಮುಖವನ್ನು ಕಟ್ಟೆಗಿಂತ ಹೆಚ್ಚು ಎತ್ತರಕ್ಕೆ ಕಟ್ಟುತ್ತಿದ್ದರು. ಶತ್ರುಗಳು ಮೇಲೆ ಹತ್ತಿದರೆ ಕಾವಲುಗಾರರು ಕಟ್ಟೆಗಳನ್ನು ಒಡೆದು ಅವರನ್ನು ಕೆಡವುತ್ತಿದ್ದರು. ಶತ್ರುಗಳು ಏಣಿಗಳಿಂದಲೂ ರಾಶಿಹಾಕಿದ ಕಟ್ಟಿಗೆ ಹೊರೆಗಳ ಕುಪ್ಪೆಗಳ ಮೇಲಿನಿಂದಲೂ ಕೋಟೆಯನ್ನು ಹಲ್ಲೆ ಮಾಡಲು ಆರಂಭಿಸಿದಾಗ ಗೋಡೆಯ ಎತ್ತರವನ್ನು ಹೆಚ್ಚಿಸಲಾಯಿತು

ಅನೇಕ ಶತಮಾನಗಳ ಕಾಲ ಕೋಟೆಗೋಡೆಗಳು ಶತ್ರುಗಳ ಆಕ್ರಮಣವನ್ನು ತಡೆದುವು. ಅನಂತರ ಕೋಟೆ ಮುತ್ತಿಗೆಯಲ್ಲಿ ನಾನಾಬಗೆಯ ತಂತ್ರಗಳು ಆಗಾಧವಾಗಿ ಬೆಳೆದು ಪ್ರಚಂಡ ರೂಪವನ್ನು ತಾಳಿ ಮುತ್ತಿಗೆಕಲೆ ಒಂದು ವಿಶಿಷ್ಟ ವಿದ್ಯೆಯಾಯಿತು. ಅವುಗಳಿಗೆ ತಕ್ಕಂತೆ ಕೋಟೆ ರಕ್ಷಣೆ ಕ್ರಮಗಳಲ್ಲೂ ವ್ಯೂಹಯುಕ್ತಿಯ ವ್ಯವಸ್ಥೆಗಳಾದುವು. ಮುತ್ತಿಗೆಯವರು ಗೋಡೆಗಳ ಕೆಳಗೆ ಸುರಂಗ ಕೊರೆದು ಒಳನುಗ್ಗುತ್ತಿದ್ದರು. ತಳಭಾಗದಲ್ಲಿ ಸುರಂಗ ತೋಡಿ ಅಡಿಪಾಯವನ್ನು ಶಿಥಿಲಗೊಳಿಸಿ ಗೋಡೆಗಳನ್ನು ಕೆಡವುತ್ತಿದ್ದರು. ಇದನ್ನು ಪ್ರತೀಕರಿಸಲು ರಕ್ಷಕರು ಪ್ರತಿ ಸುರಂಗಗಳನ್ನು ತೋಡಿ, ಸ್ಫೋಟಿಸಿ ಅಥವಾ ಶತ್ರು ಸುರಂಗಗಳಿಗೆ ಹೊಗೆ ತುಂಬಿ ಅವರನ್ನು ಓಡಿಸುತ್ತಿದ್ದರು. ಶತ್ರುಗಳ ಅಸ್ತ್ರ, ಭಾಣಗಳನ್ನು ತಡೆಯಲು ಶಕ್ಯವಾಗುವಂತೆ ವರ್ತುಲಾಕಾರದ ಸ್ತೂಪಗಳು ರಚಿತವಾದುವು. ಶತ್ರುಗಳು 120'-150' ಉದ್ದದ ಟಗರಿನ ಮುಖದ ತೂಗುದಿಮ್ಮಿಗಳಿಂದ ಗೋಡೆಗಳನ್ನು ಒಡೆಯುತ್ತಿದ್ದರು. ಒಮ್ಮೆ ಒಂದು ತೂಗು ದಿಮ್ಮಿಯನ್ನು ಚಲಿಸಲು 200ಎತ್ತುಗಳು ಬೇಕಾದುವೆಂದೂ 1,500 ಜನರು ಒಟ್ಟಾಗಿ ಅದನ್ನು ಗೋಡೆಗೆ ದೂಡಬೇಕಾಯಿತೆಂದೂ ದಾಖಲೆಯಿದೆ.

ರೋಮಕರ ಅವನತಿಯ ತರುವಾಯ ಕೋಟೆಕಲೆ ಮತ್ತು ಮುತ್ತಿಗೆ ತಂತ್ರಗಳು ಕ್ಷಯಿಸಿ ದುರ್ಗರಚನೆಯಲ್ಲಿ ಅನೇಕ ಶತಮಾನಗಳ ಕಾಲ ಪ್ರಗತಿಯಾಗಲಿಲ್ಲ. ಮಧ್ಯ ಯುಗದ ಪಾಳೆಗಾರಿಕೆಯ ಅವ್ಯವಸ್ಥೆಯಲ್ಲಿ ಫ್ರಾನ್ಸ್, ಇಂಗ್ಲೆಂಡಿನಲ್ಲಿ ಅರಾಜಕತೆ. ಹಿಂಸೆ, ಲೂಟಿ, ದರೋಡೆಗಳೂ ಸ್ಥಳಿಕ ಸರದಾರರಲ್ಲಿ ಪರಸ್ಪರ ದ್ವೇಷ, ಪೈಪೋಟಿಯ ಕಾದಾಟಗಳೂ ಬಂದು ಬಲಿಷ್ಠರು ಜನರ ರಕ್ಷಕರೂ ದಣಿಗಳೂ ಆಗಿ ಅವರಿಂದ ತೆರಿಗೆ ಸೆಳೆಯುತ್ತಿದ್ದರು. ಈ ಪಾಳೆಗಾರರು ತಮ್ಮ ಶತ್ರುಗಳ ಕಾಟವನ್ನು ತಪ್ಪಿಸಿಕೊಳ್ಳಲೂ ತಮ್ಮ ಪ್ರಜೆ, ಸೀಮೆಗಳನ್ನು ಕಾಪಾಡಲೂ ತಮ್ಮ ಮತ್ತು ಅನುಯಾಯಿ ಫಟಿಂಗರ ನಿವಾಸಕ್ಕೂ ಕ್ಯಾಸಲ್ ಎಂಬ ಕೋಟೆಗಳನ್ನು ಕಟ್ಟಿಕೊಳ್ಳುತ್ತಿದ್ದರು. ಈ ದುರ್ಗಗಳ ಕ್ರಮ ಹೀಗಿತ್ತು. ಸುತ್ತಲೂ ಕಡಿದಾದ ಇರಕಲು ಪಕ್ಕಗಳಿರುವ ಎತ್ತರದ ದಂಡೆ ಅಥವಾ ಗುಡ್ಡದ ಮೇಲೆ ಎತ್ತರದ ವರ್ತುಲಾಕಾರದ ಮಣ್ಣುಕಟ್ಟೆ, ಅದರ ಸುತ್ತಲೂ ನೀರಿನ ಕಂದಕ, ತುದಿಯ ಶಿಖರದ ಸುತ್ತಲೂ ಚೂಪಾದ ಉದ್ದನೆ ಗೂಟಗಳ ದಸಿಬೇಲಿ ಅಥವಾ ಕಲ್ಲುಕಿಲ್ಲೆ, ಅದರೊಳಗೆ ಎತ್ತರವಾದ ಗಿರಿದುರ್ಗದ ಬುರುಜು ಸ್ತೂಪ, ಸುತ್ತಮುತ್ತಲ ಪ್ರಾಂತ್ಯವನ್ನು ವೀಕ್ಷಿಸಲು ಪಹರೆಗೋಪುರ, ಕೋಟೆ ಪ್ರವೇಶಕ್ಕೆ ಕಂದಕವನ್ನು ದಾಟಲು ಚಲಿಸುವ ಕೀಲು ಸೇತುವೆ, ಶತ್ರುಗಳ ಅಸ್ತ್ರ, ಉರಿಯುವ ಕೊಳ್ಳಿಗಳನ್ನು ತಡೆಯಲು ಗೋಡೆಗೆ ರಂಧ್ರಗಳು, ಹೊರಗಿನವರು ಪ್ರವೇಶಿಸಲಾಗದಂತೆ ಕೀಲುಸೇತುವೆಯನ್ನು ಮೇಲೆತ್ತಿ ಗೋಡೆಯ ತೂತನ್ನು ಮುಚ್ಚಲು ಮೇಲಿನಿಂದ ಇಳಿಸುವ ಭಾರವಾದ ಹೆಬ್ಬಾಗಿಲು, ವಾಸ್ತುಶಿಲ್ಪಿಗಳ ಚಾತುರ್ಯದಿಂದ ಕ್ರಮೇಣ ಭಾರಿ ಕೋಟೆಮನೆಗಳೂ ಬಾಗಿಲಿನಲ್ಲಿ ಬೋನುಗಳೂ ಅನೇಕ ಸುಧಾರಣೆಗಳೂ ಬಂದುವು. 12ನೆಯ ಶತಮಾನದಲ್ಲಿ ಕಟ್ಟಿದ ಲಂಡನ್ ದುರ್ಗವೆಂಬ ಪ್ರಖ್ಯಾತ ಸಮಚತುಷ್ಕೋಣ ಗೋಪುರ ಇಂಗ್ಲೆಂಡ್ ರಾಜನ ಅರಮನೆಯಾಗಿಯೂ ತರುವಾಯ ರಾಜಕೀಯ ಕೈದಿಗಳಿಗೆ ಸರ್ಕಾರದ ಸೆರೆಮನೆಯಾಗಿಯೂ ಇದ್ದು ಈಗ ಯುದ್ಧಾಯುಧ ಸಂಗ್ರಹ ಶಾಲೆಯಾಗಿದೆ. ಈ ಕಾಲದಲ್ಲಿ ಈ ದುರ್ಗಮ ಕೋಟೆಗಳನ್ನು ನಿಗ್ರಹಿಸುವುದು ಬಹುಮಟ್ಟಿಗೆ ಅಸಾಧ್ಯವಾಗಿತ್ತು. ಒಳಿಗಿನವರಿಗೆ ಆಹಾರ ಸಂಚಯಗಳು ಹೋಗದಂತೆ ಹಾದಿ ಕಟ್ಟುವುದೊಂದೇ ಮಾರ್ಗ, ಹದಿನಾಲ್ಕನೆಯ ಶತಮಾನದಲ್ಲಿ ಫಿರಂಗಿ ಗುಂಡುಗಳು ಬಂದು ಈ ಗಿರಿದುರ್ಗಗಳನ್ನು ಸುಲಭವಾಗಿ ಒಡೆಯಲು ಸಾಧ್ಯವಾಯಿತು. 1450ರಲ್ಲಿ ಫ್ರಾನ್ಸಿನ ಏಳನೆಯ ಚಾಲ್ರ್ಸ್ ನಾರ್ಮಂಡಿಯ ಎಲ್ಲ ಕೋಟೆಗೃಹಗಳನ್ನೂ ಒಂದೇ ವರ್ಷದಲ್ಲಿ ಇಂಗ್ಲಿಷರಿಂದ ಕಿತ್ತುಕೊಂಡ. ಇಟಲಿಯಲ್ಲಿ ಕೋಟೆ ಕೊತ್ತಳಗಳಿಂದ ಬಲಪಡಿಸಲ್ಪಟ್ಟಿದ್ದ ಅನೇಕ ಕೋಟೆಗೃಹಗಳನ್ನು ಎಂಟನೆಯ ಚಾಲ್ರ್ಸ್ 1494ರಲ್ಲಿ ಬಹು ಶೀಘ್ರವಾಗಿ ಜಯಿಸಿದ. ಕೋಟೆಗಳ ಭದ್ರತೆಗೆ ಹೊಸ ರಚನಾಕ್ರಮಗಳು ಅಗತ್ಯವಾದುವು. ಹದಿನೈದನೆಯ ಶತಮಾನದ ಕೊನೆಯಲ್ಲಿ ಬಂದೂಕು, ಫಿರಂಗಿಗಳು ಪ್ರಬಲವಾಗಿ ಎತ್ತರದ ಕಲ್ಲು ಗೋಡೆಗಳು ಗುಂಡಿನೇಟಿಗೆ ಗುರಿಯಾದುವು. ಆದ್ದರಿಂದ ಕೋಟೆ ನಿರ್ಮಾಣದಲ್ಲಿ ಅನೇಕ ಪರಿಷ್ಕರಣಗಳಾದವು. ಸೈನಿಕ ಶಿಲ್ಪಿಗಳು ಕೋಟೆಗಳ ರಕ್ಷಣಶಕ್ತಿಯನ್ನು ಸೃಷ್ಟಿಸಿದರು. ಕೋಟೆಯ ಚಿತ್ರರೇಖೆಯನ್ನು ಬದಲಿಸಿ. ಹಿಂದಿನ ನೇರವಾದ ಕೋಟೆಗಳನ್ನು ಮಾರ್ಪಡಿಸಿ, ಇಸ್ಪೀಟಿನ ಎಕ್ಕದ ಆಕಾರದಲ್ಲಿ ಮುಂದಕ್ಕೆ ಚಾಚಿ ಕೊಂಡಿರುವ ಬುರುಜುಗಳನ್ನು ಕೋಟೆಗೆ ಅಂತರಗಳಲ್ಲಿ ಕಟ್ಟಲಾಯಿತು. ಕೋಟೆ ರಕ್ಷಕರು ಅಡ್ಡಲಾಗಿ ಬಂದೂಕನ್ನು ಹೊಡೆದು ಮುತ್ತಿಗೆ ಸೈನ್ಯವನ್ನು ನಿವಾರಿಸಲು ಸಾಧ್ಯವಾಗುವಂತೆ ಬುರುಜುಗಳನ್ನು ಅಳವಡಿಸಲಾಯಿತು. ಸಾಮಾನ್ಯ ಕೋಟೆಗಳಲ್ಲಿ ಐದಾರು ಬುರುಜುಗಳಿದ್ದವು. ಅವುಗಳಿಗೆ ನಕ್ಷತ್ರ ಕೋಟೆಗಳೆಂದು ಹೆಸರಾಯಿತು. ಜಗತ್ತಿನ ಅತಿ ಶ್ರೇಷ್ಠ ಎಂಜಿನಿಯರುಗಳ ದರ್ಜೆಯವನಾಗಿದ್ದ ವಾಬನ್ (ಫ್ರೆಂಚ್) ಎಂಬಾತ 17ನೆಯ ಶತಮಾನದಲ್ಲಿ ಬುರುಜುಕೋಟೆಯ ಕ್ರಮವನ್ನು ಪೂರ್ಣಗೊಳಿಸಿದ. ಈತ ಸಮಾಂತರ ಕಂದಕಗಳನ್ನು ತೋಡಿ ಬುರುಜುಕೋಟೆಯನ್ನು ಸಮೀಪಿಸಿ ಅದನ್ನು ಫಿರಂಗಿಯಿಂದ ಒಡೆಯುವ ಕ್ರಮವನ್ನು ಸಹ ಕಂಡುಹಿಡಿದ. ಐದು ಬುರುಜುಗಳುಳ್ಳ ನಕ್ಷತ್ರ ಚಿತ್ರರೇಖೆ ಬದಲಾಗಿ ಟಿನೇಲ್ ಎಂಬ ಚಿತ್ರರೇಖೆ ಬಂದಿತು. ಅದರಲ್ಲೂ ಕೆಲವು ನ್ಯೂನತೆಗಳಿದ್ದರಿಂದ ಬುರುಜು ಚಿತ್ರರೇಖೆ ಕಲ್ಪಿತವಾಯಿತು. ಈ ಹೊಸ ನಮೂನೆಗಳು ಹೆಬ್ಬಾಗಿಲು, ದಾಳಿಗಾರರನ್ನು ಆಕ್ರಮಿಸಲು ಸ್ತಂಭ, ಮುಚ್ಚಳ, ಮುಂತಾದ ಅನೇಕ ಅಂಗಗಳೊಡನೆ ರಚಿತವಾದುವು. ದೊಡ್ಡಕೋಟೆಯ ಪ್ರತಿಭಾಗವೂ ಉಳಿದ ಭಾಗಗಳಿಂದ ಬೇರೆಯಾಗಿ, ಪ್ರತ್ಯೇಕ ಸೇನೆಯನ್ನು ಪಡೆದು ಪ್ರತ್ಯೇಕ ಕೋಟೆಯಂತಾಗಿ ರಕ್ಷಣೆಗೆ ಉಳಿದ ಭಾಗಗಳೊಡನೆ ಸಹಕರಿಸುತ್ತಿತ್ತು. ಇನ್ನೊಬ್ಬ ನಿಪುಣ ಫ್ರೆಂಚ್ ಎಂಜಿನಿಯರ್ ಮೋಂಟಾಲೆಂಬರ್ಟ್ ಎಂಬಾತ ಬಹುಭುಜ ಕೋನಗಳ ಆಕೃತಿಯ ಕೋಟೆಯನ್ನು ಕಲ್ಪಿಸಿದ. ಜರ್ಮನರೂ ಪ್ರಷ್ಯನರೂ ಈ ಕ್ರಮವನ್ನು ಆಚರಿಸಿದರು. ಚತುರ ಡಚ್ ಎಂಜಿನಿಯರುಗಳೂ ಅನೇಕ ಪ್ರಖ್ಯಾತ ಕೋಟೆಗಳನ್ನು ರಚಿಸಿದರು. ಅವರ ಆಸ್ಟನಡ್ ಕೋಟೆ ಮುತ್ತಿಗೆಯನ್ನು ಮೂರು ವರ್ಷ ಕಾಲ ಎದುರಿಸಿತು.

ಹಿಂದಿನ ಕಾಲದ ಎತ್ತರದ ಕಲ್ಲುಗೋಡೆಗಳ ಬದಲು ತಗ್ಗಾದ ದಪ್ಪ ಮಣ್ಣು ಗೋಡೆಗಳು ಕಲ್ಲಿನ ಮೇಲ್ಮೈಗೆ ಬಂದು ಕೋಟೆಗೋಡೆಯನ್ನು ಮುಚ್ಚಿ ಮರೆ ಮಾಡಿದುವು. ಕಂದಕವನ್ನು ತೋಡಿ ಅದರ ತಳಕ್ಕೆ ಕೋಟೆಗೋಡೆಯನ್ನು ಸೇರಿಸುವ ಹೊಸ ವಿಧಾನ ಬಂದಿತು. ಕಲ್ಲಿನ ಪಾಗಾರವಿರುವ ರಕ್ಷಣೆಯ ಮಣ್ಣುದಿಬ್ಬಗಳ ಅಳುವೇರಿಗಳು (ರ್ಯಾಂಪಟ್ರ್ಸ); ಅವು ಹಾರಿಬರದಂತೆ ಗೋಡೆಯಿಂದ ಅಳುವೇರಿಯ ಕೆಳಗೆ ಕಮಾನಿನ ಸುರಂಗಮಾರ್ಗಗಳ ಕಟ್ಟಣೆ, ಬುರುಜುಗಳ ಸುತ್ತಲೂ ನೀರಿನ ಕಂದಕ, ಕಂದಕದ ಎದುರಿಗೆ ಕೋಟೆಯ ಸುತ್ತಲೂ ದಿಡ್ಡಿ ಗೋಡೆಯ ಎತ್ತರಕ್ಕಿಂತಲೂ ಹೆಚ್ಚು ಎತ್ತರವಾದ ಗ್ಲೇಸಿಸ್ ಎಂಬ ಕಡಿದಾದ, ಇರುಕಲು ಮಣ್ಣು ದಿಬ್ಬಗಳು: ಅವುಗಳ ಹಿಂದೆ ರಕ್ಷಣಾ ಸೈನ್ಯ ಸೇರಲು ಮುಚ್ಚಿಗೆಯ ಆಶ್ರಯ-ಇವು ಕೋಟೆಯ ಅಂಗಗಳು. ಶತ್ರುಸೈನ್ಯ ಕೋಟೆಗೋಡೆಗೆ ಹಾರಿಸಿದ ಫಿರಂಗಿ ಗುಂಡುಗಳು ಮೆದುಮಣ್ಣಿನಲ್ಲಿ ಹೂತುಹೋಗಿ ಗೋಡೆಗಳಿಗೆ ಅಪಾಯವಾಗುವುದಿಲ್ಲ. ಪಟ್ಟಣಗಳಿಗೆ ಹಿಂದೆಯೇ ಕಟ್ಟಿದ್ದ ಕೋಟೆಗೋಡೆಗಳಲ್ಲಿ ಮಣ್ಣುದಿಬ್ಬ, ಕೊತ್ತಲಗಳನ್ನು ಕಟ್ಟಿ ಗೋಡೆಗಳನ್ನು ಬುರುಜುಗಳಿಂದ ಭದ್ರಪಡಿಸಲಾಯಿತು. ನಾನಾದೇಶಗಳ ಗಡಿನಾಡುಗಳಲ್ಲಿ ವ್ಯೂಹ ಯುಕ್ತಿಯ ಸ್ಥಳಗಳಲ್ಲೂ ಸಮುದ್ರತೀರಗಳಲ್ಲೂ ಬುರುಜು ಕೋಟೆಗಳು ರಚಿತವಾದುವು. ಉತ್ತರ ಅಮೆರಿಕದಲ್ಲಿ ವಸಾಹತು ಮಾಡಿದವರು ರೆಡ್ ಇಂಡಿಯನ್ನರ ದಾಳಿಯನ್ನು ತಡೆಯಲು ಮತ್ತು ರೇವು, ನದಿಗಳನ್ನು ರಕ್ಷಿಸಲು ಬುರುಜುಕೋಟೆಗಳನ್ನೂ ಕಟ್ಟಿಗೆ ಬೇಲಿಯ ಮುಂಡಿಗೆ ಕೋಟೆಗಲಿಗೆ ಮರದ ಚದರ ದಿಮ್ಮಿಗಳಿಂದ ಎರಡು ಅಂತಸ್ತಿನ ಮನೆಗಳನ್ನೂ (ಬ್ಲಾಕ್ ಹೌಸಸ್) ಕಟ್ಟಿದರು. ಫ್ರೆಂಚ್ ವಲಸೆಗಾರರು ಬ್ರಿಟಿಷ್ ವಲಸೆಗಾರರನ್ನು ತಡೆಗಟ್ಟಲು ಸೇಂಟ್ ಲಾರೆನ್ಸ್ ಮತ್ತು ಒಹಾಯೋ ನದಿಗಳ ದಡಗಳಲ್ಲಿ ಬಲವಾದ ಕೋಟೆಗಳನ್ನು ಕಟ್ಟಿದರು.

ಇಂಕ ಸಾಮ್ರಾಜ್ಯದ ಕೋಟೆ: ಅಳಿದುಹೋದ ಇಂದ ಸಾಮ್ರಾಜ್ಯದ ಸ್ವಚ್‍ಸುಹೃಮಾನ್ ಎಂಬ ಕೋಟೆ ಪೃಥ್ವಿಯ ಅತ್ಯಂತ ಮಹತ್ತರ ಕೋಟೆಗಳಲ್ಲೊಂದು. ಅದರ ಪ್ರತಿಯೊಂದು ಕಲ್ಲೂ 20' ಎತ್ತರ. ಕೆಲವು ಕಲ್ಲುಗಳು 100 ಟನ್‍ಗಿಂತಲೂ ಹೆಚ್ಚು ಭಾರ. ಅವುಗಳಿಗೆ ಗಾರೆಯನ್ನೇ ಉಪಯೋಗಿಸಿಲ್ಲ. ಆದರೂ ಅನೇಕ ಶತಮಾನಗಳ ಅನಂತರವೂ ಎಷ್ಟು ಹೊಂದಿಕೆಯಿಂದ ಸರಿಗೂಡಿವೆಯೆಂದರೆ ಅವುಗಳ ಮಧ್ಯೆ ಚಾಕುವಿನ ಅಲಗನ್ನು ಕೂಡ ತೂರಿಸಲು ಸಾಧ್ಯವಿಲ್ಲ! 12-16ನೆಯ ಶತಮಾನಗಳ ಯಾವ ಆಯುಧಗಳೂ ಆ ಕೋಟೆಯನ್ನು ಜಗ್ಗಿಸಲಾಗಲಿಲ್ಲ. ಹನ್ನೆರಡು ಕೋನಗಳುಳ್ಳ ಕಲ್ಲುಗಳು ಜಿಗ್‍ಸಾ ಒಗಟಿನಂತೆ ಸಮಂಜಸವಾಗಿ ಸೇರಿಸಲ್ಪಟ್ಟಿವೆ. ಕಾಮಾಟಿಗರು ಕಲ್ಲುದಿಮ್ಮಿಗಳಿಗೆ ಸಮಚತುಷ್ಕೋನಾಕೃತಿಯನ್ನು ಕೊಟ್ಟು ಕಚ್ಚು ಮತ್ತು ಸರಿಗಳನ್ನು ಕೊರೆದು ಗಾರೆಯಿಲ್ಲದೆ ಒಂದಕ್ಕೊಂದು ಅಚ್ಚುಕಟ್ಟಾಗಿ ಹೊಂದಿಕೆಯಾಗುವಂತೆ ಜೋಡಿಸಿ ಭೂಕಂಪಗಳು ಕೂಡ ಅಲುಗಾಡಿಸದಂತೆ ಕೀಲುಗಳನ್ನು ಮಾಡಿ ರೇಸರ್‍ಬ್ಲೇಡ್ ಕೂಡ ತೂರಲಾರದಷ್ಟು ನಾಜೂಕಾಗಿ ಹೊಂದಿಸಿ ಕೂಡಿಸಿರುವುದು ಬಲು ವಿಸ್ಮಯದ ಸಂಗತಿ. ಗಣಿತಶಾಸ್ತ್ರನಿಯಮಗಳನ್ನು ಅನುಸರಿಸಿ ಕೆತ್ತಲ್ಪಟ್ಟಂತೆ ಭಾರಿ ಕಲ್ಲುದಿಮ್ಮಿಗಳು ಸುಂದರವಾಗಿ ಹೊಂದಿಕೆಯಿಂದ ಕೂಡಿಸಲ್ಪಟ್ಟಿವೆ. ಗಟ್ಟಿ ಬಂಡೆ ಮಧ್ಯದಲ್ಲಿ ಬಿರುಕುಬಿಟ್ಟಿದ್ದರೂ ಆ ಸೀಳಿನಿಂದ ಒಂದಂಗುಲ ದೂರದಲ್ಲಿರುವ ಕೀಲು ಅಲುಗಾಡಿಲ್ಲ. ಉಕ್ಕು, ಚಕ್ರಗಳನ್ನರಿಯದೆ ಗಟ್ಟಿಯಾದ ಕಲ್ಲುಗಳನ್ನು ಹೇಗೆ ಕತ್ತರಿಸಿ ಸಮ ಮಾಡಿದರು. 100 ಟನ್ ಭಾರದ ಕಲ್ಲಿನ ದಿಮ್ಮಿಗಳನ್ನು ಒಂದರ ಮೇಲೊಂದಿಡಲು 15' ಎತ್ತರ ಹೇಗೆ ಏರಿಸಿದರು; ಬಂಡೆದೂಳು. ಒದ್ದೆಯಾದ ಮರದ ತುಂಡುಗಳು, ಸಸ್ಯದ ಆಮ್ಲ ಹೊರತು ಬೇರೆ ಉಪಕರಣಗಳಿಲ್ಲದೆ ಅಗಾಧ ಕೋಟೆಯನ್ನು ಹೇಗೆ ನಿರ್ಮಿಸಿದರು ಇವೇ ಮುಂತಾದವು ಈಗಿನ ಕಾಲದ ಎಂಜಿನಿಯರುಗಳಿಂದಲೂ ಬಿಡಿಸಲಾಗದ ಒಗಟುಗಳು. ಸ್ಪೇನಿನವರು ಇಂಕ ಗೋಡೆಗಳ ಮೇಲೆ ಕಟ್ಟಡಗಳನ್ನು ಗಾರೆಯಿಂದ ಕಟ್ಟಿದ್ದರೂ 1950ರ ಭೂಕಂಪದಲ್ಲಿ ಹೊಸ ಕಟ್ಟಡಗಳೆಲ್ಲ ಕುಸಿದರೂ ಇಂಕ ಗೋಡೆಗಳು ಮಾತ್ರ ಅಲುಗಾಡಲಿಲ್ಲ.

ಭಾರತದ ಕೋಟೆಗಳು: 15 ಉಪನಗರಗಳಿಂದ ಕೂಡಿದ್ದ ಪುರಾತನ ದೆಹಲಿಯ ಸುತ್ತಲೂ ಬೃಹತ್ ಶಿಲಾಭಿತ್ತಿಗಳಿದ್ದುವು. ಇಂದ್ರಪ್ರಸ್ಥದಲ್ಲಿದ್ದ ಪಾಂಡವರ ಕೋಟೆಯ ಜಾಗದಲ್ಲಿ ಹುಮಾಯೂನ್ ಕಟ್ಟಿದ ಹಳೇ ಕೋಟೆಯಿದೆ. ಷಾಜಹಾನ್ 628ರಲ್ಲಿ ಕಟ್ಟಲಾರಂಭಿಸಿದ ಕೆಂಪುಕೋಟೆ ಮುಗಿಯಲು 30 ವರ್ಷಗಳು ಹಿಡಿದುವು. ಆಗ್ರದ ಕೋಟೆಗೆ ಅಕ್ಬರ್ ಡೆಲ್ಲಿ ದ್ವಾರವನ್ನೂ ಷಾಜಹಾನ್ ಅಮರಸಿಂಗ್ ದಕ್ಷಿಣ ಇನ್ನೂ ಕಟ್ಟಿಸಿದರು. ಫತೇಪುರ್ ಸಿಕ್ರಿಯ ಕೋಟೆಗೆ ಅಕ್ಬರ್ ಕಟ್ಟಿಸಿದ ದ್ವಾರ ಇಡೀ ಭಾರತದಲ್ಲಿ ಅತ್ಯಂತ ಎತ್ತರದ್ದು. ಗ್ವಾಲಿಯರ್, ಭಟಿಂಡ, ಬಯಾನ್, ತುಲಂಬಾ, ಮಾಂಡ್ರೇಯಲ್, ಚುನಾರ್ ಕಾಂಗ್ರಾ, ಹೂಗ್ಲಿ, ಮ್ಯಾಲಟ್, ಬಹ್ರಾಂಪುರ್, ಅಜ್ಮೀರ್, ಭಿಲ್ಸಾ,ಝಾನ್ಸಿ ಮುಂತಾದ ಅನೇಕ ಕೋಟೆಗಳಲ್ಲಿ ಮುತ್ತಿಗೆಗಳಾದುವು. ಭರತ್‍ಪುರ್, ತಂಬೋರಿನ, ಮೇವಾರ, ಇತಿಹಾಸಪ್ರಸಿದ್ಧ ರಾಣಿಪದ್ಮಿನಿಯ ಚಿತ್ತೂರುಗಳು ರಜಪೂತರ ಕೋಟೆಗಳು. ಹಿಂದೂ ಆಳ್ವಿಕೆಯ ಉಚ್ಛ್ರಾಯಸ್ಥಿತಿಯ ಕಾಲದಲ್ಲಿ ಕಾಬೂಲಿನಿಂದ ಪಿಷಾವರ್ ವರೆಗೂ ರಾವಲ್‍ಪಿಂಡಿಯಿಂದ ಲಾಹೋರ್ ವರೆಗೂ ಕೋಟೆಗಳ ಮಾಲಿಕೆಯಿತ್ತು. ಲಾಹೋರ್ ಕೋಟೆ ರಚನ ವಿನ್ಯಾಸ, ಕೆಲಸಗಾರಿಕೆಗಳಲ್ಲಿ ದೆಹಲಿ, ಆಗ್ರಾಗಳ ಕೆಂಪು ಕೋಟೆಗಳಿಗೆ ಅನುರೂಪವಾಗಿವೆ. ಶಿವಾಜಿಯ ಸಿಂಹಗಡ ರಾಜಗಡ ದುರ್ಗಗಳು ಪ್ರಖ್ಯಾತವಾದವು. ಕಡಲ್ಗಳ್ಳರನ್ನು ತಡೆಯಲು ಗುಜರಾತ್ ಸುಲ್ತಾನ 1532ರಲ್ಲಿ ಬೇಸೆನ್ ಕೋಟೆಯನ್ನು ಕಟ್ಟಿದ. ಈಸ್ಟ್ ಇಂಡಿಯ ಕಂಪನಿ ಸಾಮಾನು ಗಡಂಗುಗಳ ಭದ್ರತೆಗೆ ಮದರಾಸು ಮುಂಬಯಿ ಕಲ್ಕತ್ತಾಗಳಲ್ಲಿ ದೇವಗಿರಿ, ಓರಂಗಲ್, ಬೀದರ್, ಬಿಜಾಪುರ, ಗೋಲ್ಕೊಂಡ, ಹೈದರಾಬಾದ್, ಥಾರೂರು ಮುಂತಾದ ಅನೇಕ ಕೋಟೆಗಳಾದುವು. ಡೆಕ್ಕನ್ನಿನಲ್ಲಿ ದೇವಗಿರಿ, ಓರಂಗಲ್, ಬೀದರ್, ಬಿಜಾಪುರ, ಗೋಲ್ಕೊಂಡ, ಹೈದರಾದುವು. ಮೈಸೂರು ಸಂಸ್ಥಾನದ ಚಿತ್ರದುರ್ಗ ಬೆಟ್ಟದ ಮೇಲೆ ವಿಜಯ ನಗರದ ಅರಸರು ಕಟ್ಟಿದ ಕೋಟೆಗಳು ಪಾಳೆಯಗಾರರಿಂದಲೂ ಮುಂದೆ ಹೈದರ್ ಟಿಪ್ಪುಗಳ ಫ್ರೆಂಚ್ ಎಂಜಿನಿಯರುಗಳಿಂದಲೂ ವಿಸ್ತರಿಸಲ್ಪತಟತವು. 25' ಎತ್ತರದ ನಾಲ್ಕು ಸುತ್ತಿನ ಬಲವಾದ ಕಲ್ಲುಗೋಡೆ, ಜೀರುಗಂಡಿ, ಬುರುಜು, ಶಸ್ತ್ರಶಾಲೆ, ಫಿರಂಗಿ ಗೃಹ. ದಿಡ್ಡಿಬಾಗಿಲುಗಳು, ಪುರದುರ್ಗ, ಬಂದೂಕು ಮದ್ದು ತಯಾರಿಕೆಯ ಕಾರ್ಖಾನೆ, ಹಲ್ಲಿನ ಚಕ್ರಗಳಿಗೆ ಸೇರಿದ 5' ವ್ಯಾಸದ ನಾಲ್ಕು ರುಬ್ಬುಗುಂಡುಗಳು, ಧಾನ್ಯಗಳ ಕಣಜ, ಎಣ್ಣೆ ತುಪ್ಪಗಳ ತೊಟ್ಟಿಗಳಿದ್ದುವು. ಡಣಾಯಕ ತಿಮ್ಮಣ್ಣ ಹೆಬ್ಬಾರ್ 1454ರಲ್ಲಿ ಶ್ರೀರಂಗಪಟ್ಟಣದಲ್ಲಿ ಕಟ್ಟಿಸಿದ ಕೋಟೆಯನ್ನು ಟಿಪ್ಪುವಿನ ಫ್ರೆಂಚ್ ಎಂಜಿನಿಯರುಗಳು ಬಲಪಡಿಸಿದರು. ಇದರಲ್ಲಿ ಗುಡುತರದ ಎರಡು ಸುತ್ತಿನ ಕಲ್ಲುಗೋಡೆಗಳೂ ಕಲ್ಲಿನಲ್ಲಿ ಕೊರೆದ ಆಳವಾದ ಎರಡು ಕಂದಕಗಳೂ ಇದ್ದುವು. ಕೋಟೆಯನ್ನು ಹಿಡಿಯಲು 1799ರಲ್ಲಿ ಜನರಲ್ ಹ್ಯಾರಿಸ್ ಹಾರಿಸಿದ ಫಿರಂಗಿ ಗುಂಡಿನ ಹೊಡೆತ ಈಗಲೂ ಕೋಡೆಗೋಡೆಯ ಮೇಲೆ ಕಾಣಿಸುತ್ತದೆ. ಪಾವಗಡದಲ್ಲಿ ಏಳು ಸುತ್ತಿನ ಕೋಟೆ, ಮಧುಗಿರಿ ಬೆಟ್ಟದ ಎರಡು ಪಾಗಾರ ಮತ್ತು ಎರಡು ಕಂದಕಗಳ ಕೋಟೆ, ಮಡಿಕೇರಿಯ ಸುತ್ತು ಸುತ್ತು ಮಾರ್ಗಗಳಿರುವ ಷಟ್ಕೋಣದ ಕಲ್ಲು ಕೋಟೆ, ಮಿಡಿಗೇಸಿ, ನಿಡುಗಲ್, ದೇವರಾಯನದುರ್ಗ, ಸಾವನ ದುರ್ಗ, ನಂದಿಬೆಟ್ಟ ಕೋಟೆಗಳು, ಧಾರವಾಡ ಜಿಲ್ಲೆಯ ನರಗುಂದ ಕೋಟೆ ಮುಂತಾದವು ಒಳ್ಳೆ ಉದಾಹರಣೆಗಳು. ಬೆಂಗಳೂರಿನಲ್ಲಿ ಕೆಂಪೇಗೌಡ 1537ರಲ್ಲಿ ಕಟ್ಟಿಸಿದ ಮಣ್ಣುಗೋಡೆಯನ್ನು ಹೈದರ್ ದೊಡ್ಡದು ಮಾಡಿ ಕಲ್ಲಿನಿಂದ ಕಟ್ಟಿಸಿದ.

ಆಧುನಿಕ ಕೋಟೆಗಳು: 1850ರ ಫ್ರೆಂಚ್-ಜರ್ಮನ್ ಯುದ್ಧವೂ 1904ರ ರಷ್ಯ ಜಪಾನ್ ಯುದ್ಧವೂ ಆ ಕಾಲದ ಕೋಟೆಗಳು ಹಳೇ ತರದವೆಂದೂ ಅವುಗಳಲ್ಲಿ ಅನೇಕ ಪರಷ್ಕರಣೆಗಳಾಗಬೇಕೆಂದೂ ಪ್ರಮಾಣಪಡಿಸಿದುವು. 19ನೆಯ ಶತಮಾನದಲ್ಲಿ ಬಂದೂಕು, ಫಿರಂಗಿಗಳ ಶಕ್ತಿ ಅಗಾಧವಾಗಿ ಬೆಳೆದು ಒಂಟಿ ಕೋಟೆಗಳಿಗೆ ಸುರಕ್ಷಣೆಯಿರಲಿಲ್ಲ. ದಾಳಿಮಾಡುವ ಫಿರಂಗಿದಳವನ್ನು ದೂರದಲ್ಲಿಡಲು ಪ್ರತ್ಯೇಕವಾದ ಕೋಟೆಗಳನ್ನು ಮಧ್ಯದ ದುರ್ಗದ ಸುತ್ತಲೂ 1-4 ಮೈಲಿ ದೂರದಲ್ಲಿ ಕಟ್ಟುವ ಕ್ರಮ ಬಂದಿತು. 1840-50ರಲ್ಲಿ ಇಡೀ ಪ್ಯಾರಿಸಿನ ಸುತ್ತಲೂ ಇಂಥ ಪ್ರತ್ಯೇಕ ಬುರುಜುಕೋಟೆಗಳು ಸ್ಥಾಪಿತವಾದುವು. ಫಿರಂಗಿಯ ಬಲ ಇನ್ನೂ ಹೆಚ್ಚಾಗಿ ಜರ್ಮನರು ಸ್ಟ್ರಾಸ್‍ಬರ್ಗ್ ಕೋಟೆಯನ್ನು ಒಂದು ಮೈಲಿಗಿಂತಲೂ ಹೆಚ್ಚು ದೂರದಲ್ಲಿ ಗುಂಡಿನಿಂದ ಒಡೆದರು. ಅವರ ಸಿಡಿಗುಂಡುಗಳನ್ನು ಪ್ಯಾರಿಸ್ ನಗರದ ಗೋಡೆಯ ಮೇಲೆ ನಾಲ್ಕುಮೈಲಿ ದೂರದಿಂದ ಹಾರಿಸಿದರು. ಆದ್ದರಿಂದ ಅವುಗಳ ನಿವಾರಣೆಗೆ ದೂರ ದೂರದ ಉಂಗುರ ಕೋಟೆಗಳು ನಿರ್ಮಿತವಾದುವು. 1910ರಿಂದ ಪ್ರತ್ಯೇಕವಾದ ಕೋಟೆಗಳನ್ನು ಪ್ರಧಾನ ದುರ್ಗದಿಂದ ಆರು ಮೈಲಿ ದೂರದಲ್ಲಿ ಕಟ್ಟಬೇಕಾಯಿತೆಂದರೆ ಅವುಗಳೇ ಸ್ವತಂತ್ರ ಕೋಟೆಗಳಂತಾದುವು. ಪಟ್ಟಣಗಳು ಬೆಳೆಯುತ್ತ ಎಷ್ಟು ಅಗಾಧವಾದುವೆಂದರೆ ಅವುಗಳ ರಕ್ಷಣೆಗೆ ಕೋಟೆಗಳನ್ನು ಕಟ್ಟುವುದು ವಿಪರೀತ ಖರ್ಚಾದ್ದರಿಂದ ಆ ಕ್ರಮ ಹೋಗಿ ಬೇರೆ ವಿಧಾನಗಳೇ ಬಂದುವು. ಪ್ರತ್ಯೇಕವಾದ ಕೋಟೆಗಳು ಪ್ರಧಾನದುರ್ಗದ ರಕ್ಷಣ ಶಕ್ತಿಯನ್ನು ಬಹಳ ಹೆಚ್ಚಿಸಿದರೂ ಅವು ಬಹುಬಲವಾದ ಫಿರಂಗಿ ಏಟಿಗೆ ನಿಲ್ಲುವಂತೆ ಕೋಟೆ ನಿರ್ಮಾಣ ಕ್ರಮವನ್ನು ಬದಲಾಯಿಸಬೇಕಾಯಿತು. ಕಲ್ಲುಗೋಡೆಗಳ ಬದಲು ಮಣ್ಣಿನ ದಿಡ್ಡಿಗೋಡೆಗಳಿಂದ ಮುಚ್ಚಿದ ಕಾಂಕ್ರೀಟ್ ಬಂದಿತು. 6'-10' ದಪ್ಪದ ಸಿಮೆಂಟ್ ಕಾಂಕ್ರೀಟಿನ ಚಾವಣಿಗಳನ್ನು ಕಟ್ಟಲಾಯಿತು. ಬಂದೂಕುಗಳ ಆಶ್ರಯಕ್ಕೆ ಗಚ್ಚಿನಿಂದ ಕಟ್ಟಿದ ಪಿಲ್‍ಬಾಕ್ಸ್ ಎಂಬ ಪ್ರತ್ಯೇಕವಾದ ಸಣ್ಣ ಕೋಣೆಗಳು ಬಂದುವು. ಹೊಸ ಹಂಚಿಕೆಗಳ ಆಧುನಿಕ ಕೋಟೆಗಳು ನಿರ್ಮಾಣವಾದುವು. ಆ ಕಾಲದಲ್ಲಿ ಇಡೀ ಯೂರೋಪಿನಲ್ಲಿ ಅತ್ಯಂತ ನಿಪುಣ ಬೆಲ್ಜಿಯಂ ಎಂಜಿನಿಯರ್ ಜನರಲ್ ಬ್ರಿಯಾಲ್ ಮೆಂಟ್ ಎಂಬಾತ ಲೀಜ್, ನಾಮರ್ ಪಟ್ಟಣಗಳಲ್ಲಿ ಬಹುಭುಜಾಕೃತಿಯ ಪ್ರತ್ಯೇಕವಾದ ಕೋಟೆಗಳನ್ನೂ ಉಂಗುರ ಕೋಟೆಗಳನ್ನೂ ಆಯುಧಗಳಿಂದ ಬಲಪಡಿಸಿದ ಕೋಟೆಗಳನ್ನೂ ನಿರ್ಮಿಸಿದ. ಬಂದೂಕನ್ನು ರಕ್ಷಿಸುವ ತಂತ್ರಗಳನ್ನೂ ಬಂದೂಕುಗಳು ಶತ್ರುಗಳಿಗೆ ಕಾಣಿಸದಂತೆ ಭೂಮಿಯೊಳಗೆ ಹೋಗಿ ಮರೆಯಿಂದ ಹೊಡೆಯಲು ಸಾಧ್ಯವಾಗುವಂತೆ ಉಕ್ಕಿನ ಗುಮ್ಮಟ ಸಣ್ಣಗೋಪುರಗಳನ್ನೂ (ಟರ್ರೆಟ್ಸ್) ರಚಿಸಿದ. ಮಿಕ್ಕ ಭಾಗದ ಉಂಗುರ ಕೋಟೆ ಕಾಂಕ್ರೀಟಿನಿಂದ ನಿರ್ಮಿತವಾಯಿತು. ಕೆಲವು ಕೋಟೆಗಳಿಗೆ ಐದು ಪಕ್ಕಗಳಿದ್ದವು. ಕೆಲವು ತ್ರಿಕೋಣಾಕೃತಿಯಲ್ಲಿದ್ದುವು. ಅವುಗಳ ಗಾತ್ರವೆಲ್ಲ ಬಹುಮಟ್ಟಿಗೆ ಭೂಮಿಯೊಳಗೆ ಕಟ್ಟಲ್ಪಟ್ಟವು. ಕೋಟೆ ವಿದ್ಯೆಯಲ್ಲಿ ಹೊಸಯುಗ ಬಂತು. ಆಂಟ್ವರ್ಪ್ ಕೋಟೆ ಬೆಲ್ಜಿಯಂ ದೇಶದ ರಕ್ಷಣೆಗೆ ವ್ಯೂಹಸ್ಥಳವಾಗಿ ಒಂದು ಲಕ್ಷ ಜನರ ಪಾಳ್ಯವಾಗಿ ಯೋಜಿಸಲ್ಪಟ್ಟಿತು. ಮೊದಲನೆಯ ಮಹಾಯುದ್ಧದಲ್ಲಿ ಫ್ರಾನ್ಸ್ ಮತ್ತು ಇತರ ಕೆಲವು ಐರೋಪ್ಯ ರಾಷ್ಟ್ರಗಳು ಉಂಗುರ ಕೋಟೆಗಳ ಮಧ್ಯೆ ಗಡಿದುರ್ಗಗಳನ್ನು ಕಟ್ಟಿದುವು. ಫ್ರಾನ್ಸ್-ಜರ್ಮನಿ ಸರಹದ್ದಿನಲ್ಲಿ ವರ್ಡನ್, ಟೂಲ್ ಮುಂತಾದ ಅನೇಕ ಸ್ಥಳಗಳ ಉಂಗುರ ಕೋಟೆಗಳನ್ನು ಸೇರಿಸಲು 67 ಮೈಲಿ ಉದ್ದದ ಗಡಿದುರ್ಗಗಳು ನಿರ್ಮಾಣವಾದುವು.

ಮೊದಲನೆಯ ಮಹಾಯುದ್ಧ ಬಹುಮಟ್ಟಿಗೆ ಯುದ್ಧ ಭೂಮಿಯಲ್ಲಿ ಕಟ್ಟಿದ ಹಂಗಾಮಿ ಕೋಟೆ ಕೊತ್ತಲಗಳಿಂದ ನಡೆಯಿತು. ಎರಡು ಡೊಂಕು ಡೊಂಕಾದ ಕಂದಕ ಸಮುದಾಯಗಳನ್ನು ಫ್ರಾನ್ಸಿನ ಸರಹದ್ದಿನ ಉದ್ದಕ್ಕೂ ಸ್ವಿಟ್ಜರ್ಲೆಂಡಿನಿಂದ ಇಂಗ್ಲಿಷ್ ಕಡಲ್ಗಾಲುವೆಯವರೆಗೂ ತೋಡಿ ಅವುಗಳ ಮಧ್ಯದ ಪ್ರಾಂತವನ್ನು ಮುಳ್ಳು ಕೊಕ್ಕೆ ತಂತಿಗಳಿಂದ ಮುಚ್ಚಿದ್ದರು. ಈ ಭೂಮಿಯ ಮೇಲೆ 26 ತಿಂಗಳುಗಳ ಕಾಲ ಯಾವ ಪಕ್ಷದ ಸೈನ್ಯಗಳೂ ಮುಂದುವರಿಯಲಾಗಲಿಲ್ಲ. ಜರ್ಮನರು ರಣರಂಗದಲ್ಲಿ ಪಿಲ್‍ಬಾಕ್ಸ್‍ಗಳನ್ನೂ ಹಿಂಡನ್‍ಬರ್ಗ್ ಎಂಬ ಅದ್ವಿತೀಯ ತಂತ್ರದ ಸುರಂಗ ಮಾರ್ಗಗಳನ್ನೂ ನಿರ್ಮಿಸಿ ಆಶ್ರಯ ಪಡೆದು ಶತ್ರುಗಳ ಅನೇಕ ಕೋಟೆಗಳನ್ನು ಮುರಿದರು. ಶಾಶ್ವತ ಕೋಟೆ ಕೊತ್ತಲುಗಳಿಗೆ ವಿಪರೀತ ಖರ್ಚಾಗುವುದೆಂದೂ ತಾತ್ಕಾಲಿಕ ಕೋಟೆಸಾಧನಗಳು ಅಷ್ಟೇ ಫಲಕಾರಿಯಾಗಿದ್ದುವೆಂದೂ ಇದರಿಂದ ಖರೆಯಾಯಿತು. ಮೆಸ್ಸಿನೆ ಗುಡ್ಡದ ಕೆಳಗಿನ ಜವರ್iನ್ ಕೋಟೆಯ ಕೆಳಗೆ ಇಪ್ಪತ್ತು ಸುರಂಗಗಳಲ್ಲಿ ಹತ್ತು ಲಕ್ಷ ಪೌಂಡ್ ಸಿಡಿಮದ್ದನ್ನು ಸ್ಫೋಟಿಸಲಾಯಿತು. ಟ್ಯಾಂಕುಗಳು ಬಂದ ಮೇಲೆ ಶಾಶ್ವತ ಕೋಟೆಗಳ ಉಪಯೋಗ ಕಡಿಮೆಯಾಯಿತು.

ಅದ್ಭುತ ಕೋಟೆಗಳು: ಮೊದಲನೆಯ ಮತ್ತು ಎರಡನೆಯ ಮಹಾಯುದ್ಧಗಳ ಮಧ್ಯೆ ಭಾರಿ ಆಧುನಿಕ ಕೋಟೆಗಳು ನಿರ್ಮಿತವಾದುವು. ಅವುಗಳಲ್ಲಿ ಅತ್ಯಂತ ದೊಡ್ಡದು ಫ್ರೆಂಚರು ಜರ್ಮನಿಯ ಸರಹದ್ದಿನಲ್ಲಿ ತಮ್ಮ ಗಡಿನಾಡಿನ ರಕ್ಷಣೆಗಾಗಿ ಕಟ್ಟಿದ್ದ ಫ್ರೆಂಚರು ಜರ್ಮನಿಯ ಸರಹದ್ದಿನಲ್ಲಿ ತಮ್ಮ ಗಡಿನಾಡಿನ ರಕ್ಷಣೆಗಾಗಿ ಕಟ್ಟಿದ್ದ ಮ್ಯಾಗಿನೋ ಲೈನ್ ಎಂಬ ಬೃಹತ್ ಕೋಟೆ. ಅದು ಪೂರ್ತಿ ಭೂಮಿಯೊಳಗೆ 600 ಮೈಲಿ ಉದ್ದ ಯುದ್ಧದ ಹಡಗಿನಂತೆ ಚಾಚಿತ್ತು. ಅದು ವಿಶ್ವದಲ್ಲಿ ಹಿಂದಿದ್ದ ಎಲ್ಲ ಕೋಟೆಗಳಿಗಿಂತಲೂ ಪ್ರಚಂಡವಾಗಿ ಮುಂದುವರಿದಿತ್ತು. ಅದಕ್ಕೆ ಉಪಯೋಗಿಸಿದ್ದ ಕಾಂಕ್ರೀಟ್ ಪೃಥ್ವಿಯಲ್ಲಿ ಮತ್ತಾವುದಕ್ಕೂ ಇಲ್ಲದಷ್ಟು ದಪ್ಪವಾಗಿತ್ತು. ಅದರ ಬಂದೂಕುಗಳು ಅತಿಭಾರವಾಗಿದ್ದವು. ಫಿರಂಗಿ ತಂಡಗಳ ಬತೇರಿ, ಸ್ವಯಂಚಲಿ ಯುದ್ಧಾಯುಧಗಳನ್ನಿಡಲು ಪಿಲ್‍ಬಾಕ್ಸ್‍ಗಳು, ಟ್ಯಾಂಕುಗಳನ್ನು ಪ್ರತಿಬಂಧಿಸಲು ಡ್ರಾ ಗನ್ ಸರ್ಪಗಳೆಂಬ ಹಲ್ಲುಗಳು ಇದ್ದುವು. ಸೈನ್ಯಗಳಿಗೆ ಸಿಡಿಗುಂಡಿನಿಂದ ಮುರಿಯದ ಚಾವಣಿಗಳಿದ್ದುವು. ಇವು ಆಧುನಿಕ ಪಟ್ಟಣಗಳಿಗಿಂತ ಹೆಚ್ಚು ಅರಾಮಕರವಾಗಿದ್ದುವು. ವಿಶ್ರಾಮ ಕ್ಷೇತ್ರಗಳು, ವಾಸಸ್ಥಾನಗಳು, ಮಂಡಿಗಳು, ಉಗ್ರಾಣಗಳು, ನಾನಾಭಾಗಗಳನ್ನು ಸಂಬಂಧಿಸುವ ರೈಲುಮಾರ್ಗಗಳು ಸ್ಥಾಪಿತವಾದುವು. ರೈಲಿನಲ್ಲಿ ಸಾಗುತ್ತಿದ್ದ ದಳಗಳು ಇವುಗಳಿಗೆ ರಕ್ಷಣೆಯನ್ನು ಒದಗಿಸುತ್ತಿದ್ದುವು. ಜರ್ಮನಿ ಕೂಡ 1936ರಲ್ಲಿ ರ್ಹೈನ್ ನದಿಯ ದಂಡೆಗಳ ಪ್ರಾಂತ್ಯದಲ್ಲಿ ಪಿಲ್‍ಬಾಕ್ಸ್ ಪರಂಪರೆಗಳಿಂದಲೂ ಬಹುತೊಡಕಾದ ವ್ಯವಸ್ಥೆಗಳಿಂದಲೂ ತುಂಬಿದ ಸೀಗ್‍ಫ್ರೆಡ್ ಲೈನ್ ಎಂಬ ದೈತ್ಯ ಕೋಟೆಯನ್ನು ಕಟ್ಟಿತು. ಜರ್ಮನಿಯ ಇಡೀ ಸರಹದ್ದಿನ ಉದ್ದಕ್ಕೂ ಕಾಂಕ್ರೀಟ್ ಮತ್ತು ಉಕ್ಕಿನ ಪ್ರತಿಬಂಧಕಗಳ ಹಿಂದೆ ಉಕ್ಕು ಮತ್ತು ಕಾಂಕ್ರೀಟಿನ ರಕ್ಷಣ ಕೋಟೆ ಕೊತ್ತಲಗಳ ನಿರ್ಮಾಣವಾಯಿತು. ರಷ್ಯವೂ ರಷ್ಯ-ಪೋಲೆಂಡ್ ಸರಹದ್ದಿನಲ್ಲಿ ಮ್ಯಾಗಿನೋ ಲೈನ್ ಕೋಟೆಯ ಮಾದರಿಯಲ್ಲಿ ಸ್ಟಾಲಿನ್ ಲೈನ್ ಎಂಬ ಕೋಟೆಯನ್ನು ಕಟ್ಟಿತು. 1944ರ ಹೊತ್ತಿಗೆ ಜರ್ಮನಿಯ ಯೂರೋಪಿನ ಕೋಟೆ ಎಂಬ ರಕ್ಷಣಾವರಣವನ್ನು ಬಲಪಡಿಸಲು ಕಾಂಕ್ರೀಟ್ ಮತ್ತು ಉಕ್ಕನ್ನು ಯಥೇಚ್ಛವಾಗಿ ಬಳಸಲಾಯಿತು. ಅಪಾರ ವಿಸ್ತೀರ್ಣಗಳಲ್ಲಿ ಕಾಂಕ್ರೀಟನ್ನು ಸುರಿದು ರೈಲು, ರಸ್ತೆ, ಪರ್ವತ ರೈಲುಗಳನ್ನು ನಿರ್ಮಿಸಿದರು. ಬಂದೂಕುಗಳನ್ನು ಕಾಣಿಸದಂತೆ ಮಾಡುವ ಬುರುಜುಗಳನ್ನು ಸ್ಥಾಪಿಸಿದರು. ಪಕ್ಕಗಳೊಳಗೆಲ್ಲ ಕೋಟೆ ಕಟ್ಟಡಗಳಾದುವು. ಹಿಂದೆ ಯಾವ ಕೋಟೆಯೂ ಇಲ್ಲದಷ್ಟು ದುರ್ಗಮವಾಗಿ ಈ ಕೋಟೆ ಕಾಣಿಸಿತು.

ಇಷ್ಟು ಶ್ರಮಸಾಧಿತ ಶಾಶ್ವತ ಕೋಟೆಗಳಿದ್ದರೂ ಎರಡನೆಯ ಮಹಾಯುದ್ಧ ಬಹುಮಟ್ಟಿಗೆ ರಣರಂಗದ ಹಂಗಾಮಿ ಕೋಟೆ ಕೊತ್ತಲಗಳಿಂದ ನಡೆಯಿತು. ಸುಳಿವು ಗೊತ್ತಾಗದಂತೆ ಬಚ್ಚಿಟ್ಟುಕೊಳ್ಳಲು ಕಂದಕ, ಸುರಂಗಗಳ ರಚನೆ, ಭೂಮಿಯ ನೈಸರ್ಗಿಕ ಸ್ವರೂಪಗಳನ್ನು ರಕ್ಷಣೆಕೊಡಲು ತಕ್ಕಂತೆ ರೂಪಿಸಿಕೊಳ್ಳುವುದು, ನರಿಯ ಬಿಲದಂಥ ಹಳ್ಳಗಳನ್ನು ತೋಡಿ ವ್ಯಕ್ತಿಯು ಬಂದೂಕಿನೊಡನೆ ಅವಿತುಕೊಂಡು ಎಲೆಗಳಿಂದ ಮುಚ್ಚಿಕೊಳ್ಳುವುದು, ಸಿಡಿಮದ್ದು ತುಂಬಿದ ಸುರಂಗ ನಿರ್ಮಾಣ, ಮುಳ್ಳು ಕೊಕ್ಕೆಗಳ ತಂತಿ ಆವರಣ, ಮೆಷಿನ್‍ಗನ್ ಕಟ್ಟಡಗಳು, ಕಾಂಕ್ರೀಟ್ ಪಿಲ್‍ಬಾಕ್ಸ್‍ಗಳು ಮುಂತಾದ ಸಾಧನಗಳಿಂದ ನಡೆಯಿತು. ವಿಮಾನದಿಂದ ಕೆಡೆದ ಬಾಂಬ್‍ಗಳಿಗೂ ಇವು ಅತ್ಯುತ್ತಮ ರಕ್ಷಣೆಯನ್ನು ನೀಡುತ್ತವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೋಟೆ&oldid=888238" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy