ವಿಷಯಕ್ಕೆ ಹೋಗು

ಚಾವಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನೆಗಳ ಚಾವಣಿಗಳು

ಚಾವಣಿ ಎಂದರೆ ಮನುಷ್ಯನ ಬಿಡಾರವನ್ನು ಮುಚ್ಚಿರುವ ಮೇಲುಭಾಗ; ಮಾಡು (ರೂಫ್). ಗುಹೆಗಳಿಗೆ ಕಲ್ಲು ಚಪ್ಪಡಿಯೋ ಗಟ್ಟಿಮಣ್ಣಿನ ಕೊರೆದ ಭಾಗವೋ ಚಾವಣಿಯಾಗಿದ್ದರೆ ಅನಂತರದ ನಿರ್ಮಾಣಗಳಾದ ಗುಡಿಸಲು ಗುಡಾರಗಳಿಗೆ ಮರ, ಬಿದಿರು, ಹಂಬು, ಎಲೆ, ಹುಲ್ಲು, ಸೋಗೆ, ಚರ್ಮ ಮುಂತಾದವುಗಳ ಯುಕ್ತ ಬಳಕೆಯಿಂದ ರಚಿಸಿದ ಹಗುರವಾದ ಹೊದಿಕೆ ಚಾವಣಿಯಾಯಿತು. ಇಲ್ಲೆಲ್ಲ ಉದ್ದೇಶ ಒಂದೇ-ನಿಸರ್ಗದ ಪ್ರತಿಕೂಲ ಏರುಪೇರುಗಳಿಂದ ಬಿಡಾರದೊಳಗಿನ ಮನುಷ್ಯರಿಗೂ ಅವರ ವಸ್ತುಗಳಿಗೂ ರಕ್ಷಣೆ ಒದಗಿಸುವುದು.[] ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಮಾದರಿಯ ಚಾವಣಿಗಳು ಬಳಕೆಗೆ ಬಂದಿರುವುದಕ್ಕೆ ಅಲ್ಲಿನ ಹವಾಗುಣ, ಅಲ್ಲಿ ದೊರೆಯುವ ಕಟ್ಟಡದ ವಸ್ತುಗಳು, ಸಾಂಸ್ಕೃತಿಕ ವಿಕಾಸ ಮುಂತಾದವು ಕಾರಣಗಳು.

ಲಕ್ಷಣಗಳು

[ಬದಲಾಯಿಸಿ]

ಚಾವಣಿಗಳು ಮಟ್ಟವಾಗಿರಬಹುದು ಇಲ್ಲವೆ ಇಳಕಲಿನಲ್ಲಿರಬಹುದು, ಮಾಡನ್ನು ಮುಚ್ಚುವ ಸಾಮಗ್ರಿ ಮಳೆ ಮತ್ತು ಹಿಮ, ಸೆಕೆ ಮತ್ತು ಚಳಿಗಳನ್ನು ತಡೆಯುವಂತೆ ಇರಬೇಕಲ್ಲದೆ ನೋಡುವುದಕ್ಕೂ ಲಕ್ಷಣವಾಗಿರಬೇಕು. ಕಾಂಕ್ರೀಟಿನಿಂದ ಕಟ್ಟುವ ಆಧುನಿಕ ಕಟ್ಟಡಗಳ ಮಟ್ಟವಾದ ಚಾವಣಿಗಳನ್ನು ಕಾಂಕ್ರೀಟಿನ ಚಪ್ಪಡಿಗಳಿಂದ ಮುಚ್ಚಿ ಮೇಲೆ ಆಸ್ಫಾಲ್ಟನ್ನು ಬಳಿದು ನೀರು ಒಳಗೆ ಇಳಿಯದಂತೆ ಮಾಡುತ್ತಾರೆ. ಇಂಥ ಮಾಡುಗಳ ಮೇಲುಭಾಗ ಮಳೆಯ ನೀರು ಧಾರಾಳವಾಗಿ ಹರಿಯುವ ಹಾಗೆ ಕೊಂಚ ಇಳಿಕಲಿನಲ್ಲಿರಬೇಕು. ಉಕ್ಕಿನ ಚೌಕಟ್ಟಿನಿಂದ ಕಟ್ಟಿದ ಮನೆಗಳಿಗೆ ಚಪ್ಪಟೆಯಾದ ಕಾಂಕ್ರೀಟಿನ ಮಾಡನ್ನು ಕಟ್ಟಬಹುದು. ಆದರೆ ಮಹಡಿಯ ಮೇಲೆ ಹೆಚ್ಚು ಸ್ಥಳ ಬೇಕಾದಾಗ ಉಕ್ಕಿನಿಂದ ತಯಾರಿಸಿದ ಮ್ಯಾನ್‍ಸರ್ಡ್ ಮಾಡನ್ನು ಕಟ್ಟಬೇಕು. ಸೀಸ, ತಾಮ್ರ, ಸತು, ಫಲಕಗಳು, ಹೆಂಚುಗಳು ಮತ್ತು ಕಲ್ನಾರು-ಸಿಮೆಂಟು ತಗಡುಗಳಿಂದ ತಯಾರಿಸಿದ ಮಾಡಿಗೆ ಆಧಾರವಾಗಿ ಮರದ ಚೌಕಟ್ಟುಗಳನ್ನು ಉಪಯೋಗಿಸುವುದು ಹಿಂದೆ ವಾಡಿಕೆಯಾಗಿತ್ತು. ಬೇಗ ಕಟ್ಟಬಹುದಾದ ಉಕ್ಕಿನ ಸರಕಟ್ಟುಗಳು ಈಚೆಗೆ ಮರದ ತೊಲೆಗಳ ಸ್ಥಾನಗಳನ್ನು ಆಕ್ರಮಿಸಿವೆ. ವಾಸದ ಮನೆಗಳು, ಸಣ್ಣ ಕಟ್ಟಡಗಳು, ಬಣ್ಣದ ಕಾರ್ಖಾನೆಗಳು, ಬಟ್ಟೆಯ ಚಲುವೆಯ ಮನೆಗಳು-ಇವುಗಳಲ್ಲಿ ಮಾತ್ರ ಈಗಲೂ ಮರವನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ.

ಚಾವಣಿಯ ಮಾದರಿಗಳು

[ಬದಲಾಯಿಸಿ]

1 ವಾರ್ಚಾಟು ಅಥವಾ ಒಂದೇ ಇಳಿಜಾರಿನ ಮಾಡು ಅತ್ಯಂತ ಸರಳವಾದ ಮಾದರಿ. ಇದರಲ್ಲಿ ಮಾಡಿದ ಇಳಿಕಲು ದೊಡ್ಡ ಮಳೆ ಬಂದಾಗಲೂ ನೀರು ಸರಾಗವಾಗಿ ಕೆಳಗೆ ಇಳಿಯುವಂತಿರಬೇಕು. ಈ ಮಾಡಿನ ಮೇಲೆ ಹೆಂಚುಗಳು, ಫಲಕಗಳು, ಸತುವಿನ ಇಲ್ಲವೆ ಕಲ್ನಾರಿನ ಹಾಳೆಗಳನ್ನು ಹೊದೆಸಬಹುದು.

2 ಎರಡು ಇಳಿಕಲುಗಳಿರುವ ಮಾಡುಗಳನ್ನು ಮಳೆ ಹೆಚ್ಚಾಗಿ ಬೀಳುವ ಪ್ರದೇಶಗಳಲ್ಲಿ ಉಪಯೋಗಿಸುವುದು ವಾಡಿಕೆ. ಇದರಲ್ಲಿ ಮಾಡಿನ ತೀರುಗಳು ಮೇಲುಭಾಗದಲ್ಲಿ ಗೋಡೆಯಿಂದ ಗೋಡೆಗೆ ಹೋಗುವ ಒಂದು ತೊಲೆಯ ಮೇಲೆ ನಿಂತಿರುತ್ತವೆ. ತೀರುಗಳ ಕೆಳಭಾಗಗಳನ್ನು ಗೋಡೆಯ ಮೇಲೆ ಕೂರಿಸಿರುವ ಒಂದು ಮಟ್ಟವಾದ ತೊಲೆಯ ಮೇಲೆ ಹಾದು ಕೊಂಚ ಮುಂದಕ್ಕೆ ನೂಕಿ ಮಳೆಯ ನೀರು ಗೋಡೆಯ ಮೇಲೆ ಬೀಳದ ಹಾಗೆ ಕಾಪಾಡುತ್ತಾರೆ. ಈ ಕ್ರಮದಲ್ಲಿ ಮಾಡಿನ ತೂಕ ಗೋಡೆಯ ಮೇಲೆ ಒಂದೇ ಸಮವಾಗಿ ಹರಡಿರುತ್ತದೆ. ಈ ನಮೂನೆಯ ಮಾಡನ್ನು 3.5ರಿಂದ 5.0 ಮೀ ಅಗಲದ ಹಜಾರದಲ್ಲಿ ಉಪಯೋಗಿಸಬಹುದು.

3 ಗೋಡೆಯಿಂದ ಗೋಡೆಗೆ ಎಳೆಯುವ ಮಟ್ಟವಾದ ಮರದ ತೊಲೆಗಳು ವಾಸದ ಮನೆಗಳಲ್ಲಿ ವಿಶೇಷ ಬಳಕೆಯಲ್ಲಿರುವ ನಮೂನೆ. ಚಾವಣಿಯ ಮೇಲುಭಾಗ ಮಳೆಯ ನೀರು ಕೆಳಕ್ಕೆ ಸರಾಗವಾಗಿ ಇಳಿಯುವಂತೆ ಕೊಂಚ ಇಳಿಕಲಿನಲ್ಲಿರಬೇಕು.

4 ಹಜಾರದ ಅಗಲ 6ಮೀ ಇದ್ದರೆ ಸುಮಾರು 3ಮೀ ಅಂತರದಲ್ಲಿ ತೊಲೆಗಳ ಮಧ್ಯಭಾಗಗಳನ್ನು ಮಟ್ಟವಾದ ಒಂದು ಮರದ ತುಂಡಿನಿಂದ ಬಿಗಿದು ಈ ತುಂಡಿನ ಮಧ್ಯದಿಂದ ಲಂಬವಾದ ಇನ್ನೊಂದು ತುಂಡನ್ನು ಚಾವಣಿಯ ಬೆನ್ನು ತೊಲೆಯನ್ನು ಸಂಧಿಸುವ ಹಾಗೆ ಕೊಡಬೇಕಾಗುತ್ತದೆ.

5 ಹಜಾರದ ಅಗಲ 6-10ಮೀವರೆಗೂ ಇದ್ದಾಗ ಕಿಂಗ್-ಪೋಸ್ಟ್ ಸರಕಟ್ಟನ್ನು ಉಪಯೋಗಿಸಬೇಕು. ಇದರಲ್ಲಿ ನಡುವಿನ ಕಂಬ ತಳದಲ್ಲಿ ತೊಲೆಗೆ ಆಧಾರವನ್ನು ಕೊಟ್ಟು ಅದರ ತಳದಿಂದ ಎರಡು ದಿಕ್ಕುಗಳಲ್ಲಿಯೂ ಎರಡು ಓರೆಯಾದ ತುಂಡುಗಳು ಮಾಡಿನ ಕೆಳಗಿನ ತೊಲೆಗೆ ಎರಡು ದಿಕ್ಕುಗಳಲ್ಲಿಯೂ ಆಧಾರಗಳನ್ನು ಕೊಡುತ್ತವೆ. ಈ ಮರದ ತುಂಡುಗಳನ್ನೆಲ್ಲ ಅಚ್ಚ ಕಬ್ಬಿಣದ ಪಟ್ಟಿಗಳಿಂದಲೂ ಬೋಲ್ಟುಗಳಿಂದಲೂ ಬಿಗಿದಿರುತ್ತಾರೆ.

6 ಹಜಾರದ ಅಗಲ 10ರಿಂದ 15ಮೀ ವರೆಗೂ ಇದ್ದಾಗ ಕ್ವೀನ್-ಪೋಸ್ಟ್ ಸರಕಟ್ಟನ್ನು ಬಳಸುತ್ತಾರೆ. ಇದರಲ್ಲಿ ತಳದ ತೊಲೆಯಿಂದ ಲಂಬವಾದ ಎರಡು ಕಂಬಗಳು ಮಾಡಿನ ಕೆಳಗಿನ ತೊಲೆಗೆ ಆಧಾರವನ್ನು ಕೊಡುತ್ತವೆ. ಇವೆರಡು ಕಂಬಗಳನ್ನೂ ಮೇಲುಗಡೆ ಒಂದು ಮಟ್ಟವಾದ ತೊಲೆಯಿಂದ ಸೇರಿಸುತ್ತಾರೆ. ಇದಲ್ಲದೆ ಒಂದೊಂದು ಕ್ವೀನ್-ಪೋಸ್ಟಿನ ತಳದಿಂದಲೂ ಓರೆಯಾಗಿ ಒಂದೊಂದು ತುಂಡು ಹೊರಟು ಮಾಡಿನ ಕೆಳಗಿನ ತೊಲೆಗೆ ಇನ್ನೊಂದು ಆಧಾರವನ್ನು ಕೊಡುತ್ತವೆ. ಇದರಲ್ಲಿಯೂ ಮರದ ತುಂಡುಗಳನ್ನೆಲ್ಲ ಅಚ್ಚಕಬ್ಬಿಣದ ಪಟ್ಟಿಗಳಿಂದಲೂ ಬೋಲ್ಟುಗಳಿಂದಲೂ ಬಿಗಿದಿರುತ್ತಾರೆ.

7 ಹ್ಯಾಮರ್ ಬೀಮ್ ಮರದ ಚೌಕಟ್ಟನ್ನು 10 ರಿಂದ 16ಮೀ ಅಗಲದ ಮಾಡುಗಳಲ್ಲಿ ಉಪಯೋಗಿಸಬಹುದು. ಇದರಲ್ಲಿ ತೀರುಗಳ ಕೆಳಗಡೆ ಹಿಂದಿನ ಚೌಕಟ್ಟುಗಳಲ್ಲಿರುವ ಹಾಗೆ ತೊಲೆಯಿರುವುದಿಲ್ಲ. ಅದರ ಬದಲು ಮಾಡಿನ ಎರಡು ತೊಲೆಗಳನ್ನೂ ಅವುಗಳ ಮಧ್ಯಭಾಗದಲ್ಲಿ ಒಂದು ಮಟ್ಟವಾದ ಕಾಲರನ್ನೂ ಸೇರಿಸುತ್ತಾರೆ. ತೊಲೆಗಳ ಕೆಳಭಾಗದಲ್ಲಿ ಗುಜ್ಜುಗಳು ಮತ್ತು ಬಿಗಿಪಟ್ಟಿಗಳು ಒಂದಕ್ಕೊಂದು ಸೇರಿಕೊಂಡು ಗೋಡೆಗಳ ಮೇಲಿನ ಒದೆತವನ್ನು ಕಡಿಮೆ ಮಾಡುತ್ತವೆ. ಈ ಚೌಕಟ್ಟಿನಲ್ಲಿ ಕಮಾನಿನ ನಮೂನೆ ಮತ್ತು ಚಾಚುಪೀಠದ ನಮೂನೆ ಎಂದು ಎರಡು ವಿಭಾಗಗಳಿವೆ. ಚಾಚುಪೀಠ ಗೋಡೆಯ ತಲೆಮಟ್ಟದಿಂದ ಮುಂದಕ್ಕೆ ಚಾಚಿ, ಕೊಂಚ ಕೆಳಗಡೆ ಗೋಡೆಯಿಂದ ಹೊರಟ ಬೋದಿಗೆಯ ಮೇಲೆ ನಿಂತಿರುತ್ತದೆ. ಯೂರೋಪಿನ ಮಧ್ಯಯುಗದ ಚರ್ಚುಗಳಿಗೆ ಈ ಗಾಂಭೀರ್ಯ ಒಪ್ಪುವ ಹಾಗಿತ್ತು.

ಮ್ಯಾನ್‍ಸರ್ಡ್ ಮಾಡಿನಲ್ಲಿ ಒಂದೊಂದು ಭಾಗದಲ್ಲೂ ಎರಡು ಇಳಿಕಲುಗಳಿವೆ. ಇವುಗಳಲ್ಲಿ ಕೆಳಗಿನದು 700ಗಳಷ್ಟು ಕಡಿದಾಗಿಯೂ ಮೇಲಿನದು 300ಗಳಷ್ಟು ಓರೆಯಾಗಿಯೂ ಇವೆ. ಈ ಉಪಾಯದಿಂದ ಒಳಗಡೆ ಹೆಚ್ಚು ಜಾಗ ಸಿಕ್ಕುತ್ತದೆ. ಸಾಮಾನ್ಯವಾಗಿ ಕೆಳಗಡೆ ಕ್ವೀನ್-ಪೋಸ್ಟ್ ಚೌಕಟ್ಟಿನ ಮೇಲೆ ಮೇಲುಗಡೆ ಕ್ವೀನ್-ಪೋಸ್ಟ್ ಚೌಕಟ್ಟನ್ನು ಇಡುವುದು ರೂಢಿ. ಈ ಮಾಡುಗಳನ್ನು ಫ್ರೆಂಚ್ ಇಂಜಿನಿಯರ್ ಮ್ಯಾನ್‍ಸರ್ಡ್ (1598-1666) ಮೊದಲ ಬಾರಿ ವರ್ಸೇಲ್ಸಿನಲ್ಲಿ ಕಟ್ಟಿದ. ಏಕೆಂದರೆ ಆಗ ಕಟ್ಟಡದ ಮುಂದುಗಡೆಯ ಗೋಡೆಗಳು ಒಂದು ಎತ್ತರಕ್ಕೆ ಮೀರಿರಬಾರದೆಂಬ ಕಾನೂನಿತ್ತು. 24ಮೀ ಉದ್ದ 12ಮೀ ಅಗಲದ ಹಜಾರದ ಮೇಲೆ ಮಾಡನ್ನು ನಿರ್ಮಿಸುತ್ತಿದ್ದುದೂ ಉಂಟು.

ಸಂಯುಕ್ತ ಮಾಡುಗಳು

[ಬದಲಾಯಿಸಿ]

ಕಬ್ಬಿಣವನ್ನೂ ಮರವನ್ನೂ ಒಂದೇ ಚೌಕಟ್ಟಿನಲ್ಲಿ ಎಲ್ಲ ನಮೂನೆಯ ಕಟ್ಟಡಗಳಲ್ಲಿಯೂ ಸಮರ್ಪಕವಾದ ರೀತಿಯಲ್ಲಿ ಬಳಸಿದ್ದಾರೆ. ಇವುಗಳಲ್ಲಿ ಒತ್ತಡದಲ್ಲಿ ಸಿಕ್ಕಿರುವ ಗುಜ್ಜುಗಳನ್ನು ಮರದಿಂದಲೂ ಎಳೆತಕ್ಕೆ ಸಿಕ್ಕಿರುವ ದೂಲಗಳನ್ನು ಕಬ್ಬಿಣದಿಂದಲೂ ತಯಾರಿಸುತ್ತಾರೆ.

ಈಗ ಉಕ್ಕಿನಿಂದ ಸರಕಟ್ಟುಗಳನ್ನು ತಯಾರಿಸುವುದೇ ವಾಡಿಕೆ. ಇವನ್ನು ಜೋಡಿಸುವುದು ಸುಲಭ. ವಾಣಿಜ್ಯ ಕಟ್ಟಡಗಳಿಗಂತೂ ಈ ಮಾದರಿ ಬಹಳ ಚೆನ್ನಾಗಿ ಹೊಂದುತ್ತದೆ. ಲಕ್ಷಣವಾದ ನಾಟಕಶಾಲೆ, ನಗರ ಸಭಾಮಂದಿರ ಮೊದಲಾದ ಕಟ್ಟಡಗಳಲ್ಲೂ ಸರಕಟ್ಟುಗಳನ್ನು ವಾಡಿಕೆಯಾಗಿ ಬಳಸುತ್ತಾರೆ. ಮೊದಲು ಮೊದಲು ಒತ್ತಡದಲ್ಲಿ ಗುಜ್ಜುಗಳಿಗೆ ಖಿ ಆಕಾರದ ತೊಲೆಯನ್ನೂ ಎಳೆತದಲ್ಲಿರುವ ದೂಲಗಳಿಗೆ ಗುಂಡಾದ ಇಲ್ಲವೆ ಚಪ್ಪಟೆಯಾದ ಕಬ್ಬಿಣದ ಕಂಬಿಗಳನ್ನೂ ಬಳಸುತ್ತಿದ್ದರು. ಈಗ ಎಲ್ಲ ಆಕಾರಗಳನ್ನೂ ಉಕ್ಕಿನ ಕೋನಗಳಿಂದ ರಚಿಸುವುದು ಎಲ್ಲೆಲ್ಲಿಯೂ ರೂಢಿಗೆ ಬಂದಿದೆ. ತೊಲೆ ಮತ್ತು ದೂಲಗಳನ್ನು ತಯಾರಿಸುವಾಗ ಎರಡು ಉಕ್ಕಿನ ಕೋನಗಳನ್ನು ಸೇರಿಸಿ ಅವುಗಳ ನಡುವೆ ಒಂಟಿ ಮೂಲೆ ಕಟ್ಟಿನ ಪಟ್ಟಿಗಳನ್ನು ರಿವೆಟ್ ಮಾಡುತ್ತಾರೆ.

ಸರಕಟ್ಟುಗಳ ತಯಾರಿಕೆಯಲ್ಲಿ ಆಕಾರ ಮತ್ತು ತಪಶೀಲುಗಳು ಸರಳವಾಗಿರಬೇಕು. ಒಟ್ಟಿನಲ್ಲಿ ಅವು ತನ್ನ ಕೆಲಸವನ್ನು ದಕ್ಷತೆಯಿಂದ ನಿರ್ವಹಿಸಬೇಕು. ಮಾಡಿನ ಅಗಲ ಹೆಚ್ಚಾಗಿದ್ದಾಗ ಜೋಡಿ ಕಾಲುವೆಗಳನ್ನು ಒತ್ತಡದಲ್ಲಿರುವ ಭಾಗಗಳಿಗೆ ಉಪಯೋಗಿಸಬಹುದು.

ಕ್ವೀನ್‍ರಾಡ್ ಸರಕಟ್ಟಿನಲ್ಲಿ ದೂಲಗಳು ಲಂಬವಾಗಿವೆ. ಗುಜ್ಜುಗಳು ಓರೆಯಾಗಿವೆ. ಸರಕಟ್ಟಿನ ತೊಲೆಯಲ್ಲಿ ಗುಜ್ಜುಗಳು ತೊಲೆಗೆ ಸಮಕೋನವಾಗಿರುತ್ತವೆ. ಉಕ್ಕಿನ ಚೌಕಟ್ಟಿನಲ್ಲಿ, ಮಾರುಕಟ್ಟೆಯಲ್ಲಿ ಹೇರಳವಾಗಿ ದೊರಕುವ ಉಕ್ಕಿನ ಆಕಾರಗಳಿಂದ ಬೇಕಾದದ್ದನ್ನು ಆರಿಸಿಕೊಂಡು ಸರಕಟ್ಟನ್ನು ತಯಾರಿಸಬಹುದು.

ಮೋಟಾರ್ ಗ್ಯಾರೇಜುಗಳಲ್ಲಿಯೂ ನೇಯ್ಗೆಯ ಷೆಡ್ಡುಗಳಲ್ಲಿಯೂ ಒಳಗಡೆ ಯಾವ ಅಡಚಣೆಯೂ ಇಲ್ಲದ ವಿಶಾಲವಾದ ಜಾಗ ನೆಲದ ಮೇಲೆ ಬೇಕಾಗುತ್ತದೆ. ಅಂಥ ಕಡೆಗಳಲ್ಲಿ 45ಮೀ ವರೆಗಿನ ಅಗಲದ ಅಂಕಣಗಳಲ್ಲಿ ಚಾಚುತೊಲೆಯ ಸರಕಟ್ಟುಗಳನ್ನು ಕಟ್ಟಿ, ಮಾಡಿನ ಪ್ರಧಾನವಾದ ಗರ್ಡರುಗಳನ್ನು ಚಾವಣಿಯ ಏಣಿನಲ್ಲಿ ಇರಿಸಿ ಅವುಗಳ ಎರಡು ಕಡೆಗಳಲ್ಲಿಯೂ ಚಾಚುತೊಲೆಗಳನ್ನು ಜೋಡಿಸುತ್ತಾರೆ. ಸರಕಟ್ಟುಗಳ ನಡುವೆ ನೀರಿನ ದೋಣಿಗಳಿರುತ್ತವೆ. ಗರ್ಡರುಗಳನ್ನು 10ಮೀ ಅಂತರದಲ್ಲಿ ಇಟ್ಟರೆ 45ಮೀ ಉದ್ದ 10ಮೀ ಅಗಲದ ವಿಶಾಲವಾದ ಹಜಾರಗಳು ದೊರಕುತ್ತವೆ.

ಚಾವಣಿಯನ್ನು ಮುಚ್ಚುವ ಸಾಮಗ್ರಿಗಳು

[ಬದಲಾಯಿಸಿ]

1. ಕೈ ಹೆಂಚು, 2. ಮಂಗಳೂರು ಹೆಂಚು, 3. ಜಿಂಕ್‍ಷೀಟುಗಳು, 4. ಕಲ್ನಾರು-ಸಿಮೆಂಟು ತಗಡುಗಳು, 5 ಸ್ಲೇಟುಗಳು, 6 ಚಪ್ಪಟೆಯಾದ ತಾರಸಿಗಳು.

1 ಹಳ್ಳಿಗಳಲ್ಲಿಯೂ ಸಣ್ಣ ಪಟ್ಟಣಗಳಲ್ಲಿಯೂ ಸಮಾಜದಲ್ಲಿ ಮಧ್ಯಮ ವರ್ಗದ ಜನರ ವಾಸದ ಮನೆಗಳಿಗೆ ಮಣ್ಣಿನಿಂದ ಊರಿನ ಕುಂಬಾರ ಮಾಡಿದ ಬೆಂಕಿಯಲ್ಲಿ ಹದವಾಗಿ ಸುಟ್ಟ ಕೈಹೆಂಚುಗಳನ್ನು (ಅಂದರೆ ದಂಬೆ ಹೆಂಚುಗಳನ್ನು) ಉಪಯೋಗಿಸುವುದು ಹಿಂದೆ ಬಳಕೆಯಲ್ಲಿತ್ತು. ಮಾಡಿನ ಮರದ ತೀರುಗಳನ್ನು ಬೆನ್ನುತೊಲೆಯಿಂದ ಕೆಳಗಿನವರೆಗೂ ಬೀಸಿ, ಅವುಗಳ ಮೇಲೆ ತೆಳುವಾದ ಗುಂಡು ಬಿದಿರುಗಳನ್ನು ಹತ್ತಿರ ಹತ್ತಿರವಾಗಿ ಜೋಡಿಸಿ ಮೇಲೆ ಕೈಹೆಂಚುಗಳನ್ನು ಹೊದೆಸುತ್ತಿದ್ದರು. ಅನುಕೂಲವಿದ್ದವರು ಗುಂಡುಬಿದಿರುಗಳ ಬದಲು ಮರದ ಪಟ್ಟಿಗಳನ್ನು ಜೋಡಿಸುತ್ತಿದ್ದರು. ಈ ನಮೂನೆಗೆ ಇದ್ದ ತೊಂದರೆಯೆಂದರೆ ಮಂಗಗಳ ಹಾವಳಿ. ಅಂಥ ಕಡೆಗಳಲ್ಲಿ ಪ್ರತಿವರ್ಷವೂ ಮಳೆಗಾಲಕ್ಕೆ ಮುಂಚೆ ಮಾಡಿನ ಮೇಲೆ ಕೈಯಾಡಿಸಿ ಒಡೆದ ಹೆಂಚುಗಳನ್ನು ತೆಗೆದು ಹೊಸ ಹೆಂಚುಗಳನ್ನು ಜೋಡಿಸಬೇಕಾಗಿತ್ತು.

ದಂಬೆ ಹೆಂಚುಗಳಿಗೂ ಕಾಸಿಲ್ಲದ ಬಡ ರೈತರ ಗುಡಿಸಲುಗಳಿಗೆ ಗದ್ದೆಯಲ್ಲಿ ಬೆಳೆದ ಬತ್ತದ ಹುಲ್ಲನ್ನು ಇಲ್ಲವೆ ಮುಳಿ ಹುಲ್ಲನ್ನು ಹೊದೆಸುತ್ತಿದ್ದರು. ಬಯಲುಸೀಮೆಯಲ್ಲಿ ರಾಗಿಯ ಹುಲ್ಲನ್ನು ಮುಚ್ಚುವುದುಂಟು. ಮಲೆನಾಡಿನಲ್ಲೂ ಕರಾವಳಿಯ ಪ್ರದೇಶಗಳಲ್ಲೂ ಅಡಿಕೆ ಮರದ ಸೋಗೆಗಳನ್ನು ಹೊದೆಸುವ ಕ್ರಮ ಬಳಕೆಯಲ್ಲಿದೆ.

2 ಮಂಗಳೂರಿನಲ್ಲಿ ಬಾಸೆಲ್ ಮಿಷನ್ನಿನವರು 1835ರಲ್ಲಿ ಹೆಂಚಿನ ಕಾರ್ಖಾನೆಯನ್ನು ಸ್ಥಾಪಿಸಿದ ಬಳಿಕ ಮನೆಗಳ ಮಾಡುಗಳಿಗೆ ಮಂಗಳೂರು ಹೆಂಚುಗಳನ್ನು ಹೊದೆಸುವುದು ಶ್ರೀಮಂತಿಕೆಯ ಲಕ್ಷಣವಾಯಿತು. ಮಳೆ ಹೆಚ್ಚಾದ ಕಡೆಗಳಲ್ಲಿ ಈಗಲೂ ಈ ಮಾದರಿ ಬಳಕೆಯಲ್ಲಿದೆ.

3 ಉಬ್ಬುತಗ್ಗಿನ (ಕಾರುಗೇಟಡ್) ಕಬ್ಬಿಣದ ತಗಡುಗಳನ್ನು ಕಾರ್ಖಾನೆಗಳು, ಮೋಟಾರು ಷೆಡ್ಡುಗಳು, ಕಾರ್ಮಿಕರ ವಾಸದ ಮನೆಗಳು, ಚಿತ್ರಮಂದಿರಗಳು-ಇವನ್ನು ಮುಚ್ಚಲು ವಿಶೇಷವಾಗಿ ಬಳಸುತ್ತಾರೆ. ಇವುಗಳಲ್ಲಿ ಕೆಲವು ಕಪ್ಪುಬಣ್ಣವಾಗಿರುತ್ತವೆ. ಆದರೆ ಕರಗಿ ನೀರಾದ ಸತುವಿನಲ್ಲಿ ಅದ್ದಿ ಬಿಳಿಯ ತಗಡುಗಳನ್ನು ಮಾಡುವುದೇ ರೂಢಿ. ಇವು ಬಹಳ ಹಗುರವಾಗಿರುವುದರಿಂದ ಇದರ ಮಾಡಿಗೆ ಹೆಚ್ಚಿನ ಮರದ ಆಧಾರ ಬೇಕಿಲ್ಲ. ಈಚೆಗೆ ಎಲ್ಲೆಲ್ಲಿಯೂ ಕೈಗಾರಿಕೆಗಳು ಬೆಳೆಯುತ್ತಿರುವಾಗ ಈ ಜ಼ಿಂಕ್‍ಷೀಟುಗಳ ಉಪಯೋಗ ದೊಡ್ಡ ಷೆಡ್ಡುಗಳ ರಚನೆಯಲ್ಲಿ ವಿಶೇಷವಾಗಿದೆ. ಇವುಗಳ ಉದ್ದ1.6 ರಿಂದ 3.0 ಮೀ ವರೆಗೂ ವ್ಯತ್ಯಾಸವಾಗುತ್ತವೆ. ವ್ಯಾಪಾರಗಾರರು ಈ ತಗಡುಗಳಿಗೆ ಮಂದಕ್ಕೆ ಅನುಗುಣವಾಗಿ ಸಂಖ್ಯೆಗಳನ್ನು ಕೊಟ್ಟಿರುತ್ತಾರೆ. 16ನೆಯ ಸಂಖ್ಯೆಯ ತಗಡು ಬಹಳ ದಪ್ಪವಾದದ್ದು. ಬಲಿಷ್ಠವಾದ ಮಾಡು ಅವಶ್ಯಕವಾದಾಗ ಅದನ್ನು ಉಪಯೋಗಿಸುತ್ತಾರೆ. 18 ಮತ್ತು 20ನೆಯ ಸಂಖ್ಯೆಗಳ ತಗಡುಗಳನ್ನು ಸಾಧಾರಣವಾದ ಮಾಡುಗಳಲ್ಲಿಯೂ 22ನೆಯ ಸಂಖ್ಯೆಯ ತಗಡನ್ನು ತಾತ್ಕಾಲಿಕವಾದ ಷೆಡ್ಡುಗಳಿಗೂ ಬಳಸುತ್ತಾರೆ. ಒಂದರ ಪಕ್ಕದಲ್ಲಿ ಇನ್ನೊಂದು ತಗಡನ್ನು ಮಾಡಿನಲ್ಲಿ ಕೂರಿಸುವಾಗ ಅವು ಅಗಲದಲ್ಲಿ ಒಂದು ಮಡಿಕೆಯಷ್ಟು ಸೇರಿರಬೇಕು. ಉದ್ದದಲ್ಲಿ ಕೊನೆಗಳಲ್ಲಿ 15 ಸೆಂ.ಮೀ. ಸೇರಿರಬೇಕು. ಒಂದು ತಗಡನ್ನು ಇನ್ನೊಂದಕ್ಕೆ ಜೋಡಿಸುವಾಗ ಗ್ಯಾಲ್ವನೀಕರಿಸಿದ ಬೋಲ್ಟುಗಳನ್ನು ತಾತ್ಕಾಲಿಕವಾದ ಕೆಲಸದಲ್ಲಿ ಉಪಯೋಗಿಸುತ್ತಾರೆ. ಆದರೆ ಪಕ್ಕಾ ಕೆಲಸದಲ್ಲಿ ತಗಡುಗಳನ್ನು ಗುಬ್ಬಿ ಮೊಳೆಗಳಿಂದ ಜೋಡಿಸಬೇಕು. ರಿವೆಟ್ಟುಗಳು ತಗಡಿನ ಉಬ್ಬಿನಲ್ಲಿರಬೇಕು. ತಗ್ಗಿನಲ್ಲಿದ್ದರೆ ನೀರು ಒಳಕ್ಕೆ ಸೋರುತ್ತದೆ. ತಗಡುಗಳನ್ನು ಮರದ ಚೌಕಟ್ಟಿನಲ್ಲಿ ಜೋಡಿಸುವಾಗಲೂ ಗುಮ್ಮಟದ ಆಕಾರದ ಬಿಗಿ ಬೆಲ್ಲೆಗಳುಳ್ಳ ಮೊಳೆಗಳನ್ನು ಉಪಯೋಗಿಸಬೇಕು. ಅಥವಾ ಗ್ಯಾಲ್ವನೀಕರಸಿದ ತಿರುಪಿನ ಮೊಳೆಗಳನ್ನು ಬಳಸಬೇಕು. ಉಕ್ಕಿನ ಚೌಕಟ್ಟುಗಳ ಮೇಲೆ ತಗಡುಗಳನ್ನು ಮುಚ್ಚುವಾಗ ಕೊಂಡಿಯ ಆಕಾರದ ಬೋಲ್ಟುಗಳನ್ನು ಉಪಯೋಗಿಸಬೇಕು. ಸೀಸದ ತಗಡುಗಳು ಗ್ಯಾಲ್ವನೀಕರಿಸಿದ ಕಬ್ಬಿಣದ ತಗಡುಗಳಿಗಿಂತ ತೂಕ ಜಾಸ್ತಿ. ಆದರೆ ಅವು ಹೆಚ್ಚಾಗಿ ಬಾಳಿಕೆ ಬರುತ್ತವೆ. ತಾಮ್ರದ ತಗಡುಗಳು ಹಗುರವಾಗಿರುತ್ತವಾದರೂ ಕಬ್ಬಿಣದ ತಗಡುಗಳಷ್ಟು ಬಲಿಷ್ಠವಾಗಿರದೆ ಇದ್ದರೂ ಅವುಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ.

ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಅಚ್ಚ ಕಬ್ಬಿಣದ ತಗಡುಗಳಿಗೆ ಕಾದ ತವರದ ಹೊದಿಕೆಯನ್ನು ಕೊಟ್ಟು ತಳದಲ್ಲಿ ಫೆಲ್ಟನ್ನಿಟ್ಟು ಜೋಡಿಸುತ್ತಾರೆ.

4 ಕಲ್ನಾರು ಸಿಮೆಂಟಿನ ತಗಡುಗಳು : ಈ ಶತಮಾನದಲ್ಲಿ ಕಲ್ನಾರು ಸಿಮೆಂಟಿನ ಹಾಳೆಗಳನ್ನು ಇಳಿಕಲಿನಲ್ಲಿರುವ ಮಾಡುಗಳಿಗೆ ವಿಶೇಷವಾಗಿ ಬಳಸುತ್ತಾರೆ. ಇವನ್ನು ಕಾರ್ಖಾನೆಗಳಲ್ಲಿಯೇ ಅಲ್ಲದೆ ವಾಸದ ಮನೆಗಳಲ್ಲಿಯೂ ಉಪಯೋಗಿಸುವರು. ಸ್ಲೇಟುಗಳು: ದಕ್ಷಿಣ ಭಾರತದ ಕಡಪದ ಕಲ್ಲಿನ ಚಪ್ಪಡಿಗಳು ಈ ವರ್ಗಕ್ಕೆ ಸೇರಿದವು. ಇವು ಗಟ್ಟಿಯಾಗಿವೆ, ಚಪ್ಪಡಿಯ ಮೂಲಕ ನೀರು ಒಳಕ್ಕೆ ಇಳಿಯುವುದಿಲ್ಲ. ಇವುಗಳ ಬೆಲೆ ಕಡಿಮೆಯಾಗಿರುವುದರಿಂದ ಮನೆಗಳಲ್ಲಿ ನೆಲದ ಮೇಲೆ ಈ ಚಪ್ಪಡಿಗಳನ್ನು ಹಿಂದೆ ಹರಡುತ್ತಿದ್ದರು. (ಈಗ ಸಿಮೆಂಟ್ ಕಾಂಕ್ರೀಟನ್ನು ಹರಡುವುದು ಸಾಮಾನ್ಯವಾಗಿದೆ). ಸಾಕಷ್ಟು ಹತ್ತಿರವಾಗಿ ಮರದ ತೀರುಗಳನ್ನು ಎಳೆದು ಅವುಗಳ ಮೇಲೆ ಮಾಡಿಗೆ ಈ ಚಪ್ಪಡಿಗಳನ್ನು ನೀರು ಕೆಳಕ್ಕೆ ಇಳಿಯುವಷ್ಟು ಇಳಿಕಲಿನಲ್ಲಿ ಉಪಯೋಗಿಸಬಹುದು. ಇಳಿಜಾರಾದ ಮಾಡುಗಳಿಗೆ ಇವನ್ನು ಬಳಸಲಾಗುವುದಿಲ್ಲ.

ಮರದ ಚಾವಣಿಗಳು

[ಬದಲಾಯಿಸಿ]

ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿಯೂ ಕೆನಡದಲ್ಲಿಯೂ ಮರದ ಹಲಗೆಗಳನ್ನು ಹಂಚಿನ ಹಾಗೆ ಚಾವಣಿಗೆ ಹೊದೆಸುವುದು ರೂಢಿ. ಇವನ್ನು ಸೀಡಾರ್ ಇಲ್ಲವೆ ಸೈಪ್ರಸ್ ಮರದಿಂದ 0.3 ರಿಂದ 0.6ಮೀ ಉದ್ದವಾಗಿಯೂ 0.30ಮೀ ಅಗಲವಾಗಿಯೂ ತಯಾರಿಸುತ್ತಾರೆ. ಈ ಮಾದರಿಗೆ ಬೆಂಕಿಯ ಅಪಾಯ ತಪ್ಪಿದ್ದಲ್ಲವಾದ್ದರಿಂದ ಇವುಗಳ ಉಪಯೋಗ ಈಚೆಗೆ ಕಡಿಮೆಯಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಇವುಗಳ ಬಳಕೆಯನ್ನು ನಿಷೇಧಿಸಿದ್ದಾರೆ.

ವಾಯುವಿನ ಒತ್ತಡ : ಮಾಡುಗಳು 6ಮೀಗಳಿಗಿಂತ ಹೆಚ್ಚಿನ ಇಳಿಕಲಿನಲ್ಲಿದ್ದರೆ ಒಂದು ಚದರಡಿಯ ಮೇಲೆ 28 ಪೌಂಡುಗಳ ವಾಯುವಿನ ಒತ್ತಡವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಚಪ್ಪಟೆಯಾದ ಮಾಡುಗಳು ಮಾಡಿನ ತೂಕವನ್ನಲ್ಲದೆ ಚದರ ಅಡಿಗೆ 56 ಪೌಂಡುಗಳ ವಾಯು ಒತ್ತಡವನ್ನು ತಡೆಯುವಂತೆ ಕೂಡ ಇರಬೇಕು. ಈ ಆಧಾರದ ಮೇಲೆ ಮಾಡಿನ ಸಾಮಗ್ರಿಯ ತೂಕವನ್ನೂ ಅದರ ಮೇಲಿನ ವಾಯು ಒತ್ತಡವನ್ನೂ ಪ್ರತ್ಯೇಕವಾಗಿ ಲೆಕ್ಕ ಹಾಕಬೇಕು.

ದೊಡ್ಡ ನಗರಗಳಲ್ಲಿ ಅಭದ್ರವಾದ ಮಾಡುಗಳು ಬಿದ್ದು ಜನಕ್ಕೆ ತೊಂದರೆಯಾಗದ ಹಾಗೆ ಕಟ್ಟಡಗಳ ನಿಯಮಗಳನ್ನು ರಚಿಸಿರುತ್ತಾರೆ. ಅವುಗಳ ಪ್ರಕಾರ ಪ್ರತಿಯೊಂದು ಮನೆಗೂ ಹೆಂಚು, ತಾರಸಿ, ಫಲಕ, ಲೋಹ ಮೊದಲಾದ ಬೆಂಕಿಯಲ್ಲಿ ಹೊತ್ತದೆ ಇರುವ ಸಾಮಗ್ರಿಗಳನ್ನೇ ಉಪಯೋಗಿಸಬೇಕು. ಕಾರ್ನೀಸುಗಳನ್ನೂ ಮಾಡಿನ ಕೊನೆಯ ಅಲಂಕಾರದ ಹಲಗೆಯನ್ನೂ ಮರದಿಂದ ತಯಾರಿಸಬಹುದು. ಮನೆಯಲ್ಲಾಗಲಿ ಕಾರ್ಖಾನೆಯಲ್ಲಾಗಲಿ ಮಾಡು 9ಮೀ ಗಳಿಗಿಂತ ಎತ್ತರವಾಗಿದ್ದರೆ ಮೇಲಕ್ಕೆ ಸಮಯ ಬಂದಾಗ ಹೋಗುವ ಅವಕಾಶವಿರಬೇಕು. ಗಡಂಗುಗಳ ಮಾಡಿನ ಇಳಿಕಲು ಒಂದು ಮೀ ಮಟ್ಟಕ್ಕೆ ಒಂದು ಮೀಟರು ಲಂಬಕ್ಕಿಂತ ಹೆಚ್ಚು ಇರಬಾರದು. ಗೋಪುರಗಳು ಮಾತ್ರ ಇನ್ನೂ ಹೆಚ್ಚಾದ ಇಳಿಜಾರಿನಲ್ಲಿರಬಹುದು. ಮನೆಗಳ ಮಾಡುಗಳು 18ಮೀ ಗಳಿಗಿಂತ ಎತ್ತರವಾಗಿದ್ದರೆ ಬೆಂಕಿ ಬಿದ್ದರೆ ಹೊತ್ತದೆ ಇರುವ ಸಾಮಗ್ರಿಗಳಿಂದಲೇ ಮಾಡನ್ನು ಕಟ್ಟಬೇಕು. ಅಕಸ್ಮಾತ್ ಬೆಂಕಿಯೇನಾದರೂ ಬಿದ್ದರೆ ಒಳಗಿರುವ ಜನರು ಬೇಗ ಕೆಳಕ್ಕೆ ಇಳಿದು ಹೊರಕ್ಕೆ ಹೋಗುವ ಅವಕಾಶವಿರಬೇಕು.

ನ್ಯೂಯಾರ್ಕ್ ನಗರದಲ್ಲಿ ಮನೆಗೆ ಮೂರು ಮಹಡಿಗಳಿದ್ದು, ಒಟ್ಟು ಎತ್ತರ 12ಮೀ ಮೀರಿದ್ದು ಮಾಡು 600ಗಿಂತ ಹೆಚ್ಚಿನ ಇಳಿಕಲಿನಲ್ಲಿದ್ದರೆ ಅದನ್ನು ಕಬ್ಬಿಣದ ತೀರುಗಳಿಂದಲೇ ಕಟ್ಟಬೇಕು. ಒಳಗಡೆ ಕಬ್ಬಿಣ ಇಲ್ಲವೆ ಉಕ್ಕಿನ ಅಂಚಿದ್ದು ಬೆಂಕಿಯಲ್ಲಿ ಸುಡದ ಸಾಮಗ್ರಿಯನ್ನು 75ಮಿಮೀ ಮುಂದಕ್ಕೆ ತುಂಬಬೇಕು. ಅದರ ಮೇಲೆ ಮಾಡಿನ ಹಂಚನ್ನೋ ಫಲಕವನ್ನೋ ಹೊದೆಸಬಹುದು.

ಹೊಸ ಕಟ್ಟಡದ ಮಾಡು : ಒಂದು ಹೊಸ ಕಟ್ಟಡಕ್ಕೆ ಮಾಡನ್ನು ನಿರ್ಣಯಿಸುವಾಗ ಅದರ ಅಗಲ, ತೂಕ, ಕೆಳಭಾಗದ ಸೌಂದರ್ಯ, ತಗಲುವ ಖರ್ಚು, ವರ್ಷ ವರ್ಷವೂ ದುರಸ್ತು ಮಾಡುವ ಸೌಲಭ್ಯ ಇವನ್ನು ಗಮನದಲ್ಲಿಡಬೇಕು.

ಮರ, ಹೆಂಚು, ಫಲಕ, ಕಲ್ನಾರು-ಸಿಮೆಂಟು ಇವುಗಳಿಂದ ನಿರ್ಮಿಸಿದ ಮಾಡಿನ ಇಳಿಕಲು 2' ಮಟ್ಟಕ್ಕೆ 1' ಲಂಬಕ್ಕಿಂತ ಕಡಿಮೆಯಿರಬಾರದು. ಇಳಿಜಾರಾದ ಮಾಡುಗಳಿಗೆ ಮರ ಇಲ್ಲವೆ ಕಬ್ಬಿಣದ ಚೌಕಟ್ಟುಗಳನ್ನು ಉಪಯೋಗಿಸಬಹುದು. ಮಾಡಿನ ಅಟ್ಟಕ್ಕೆ ಉದ್ದ ಸರಗಳಿಂದ ಇಲ್ಲವೆ ತೀರುಗಳಿಂದ ಆಧಾರವನ್ನು ಕೊಡಬೇಕು. ತೀರುಗಳ ಕೆಳಗಿನ ಕೊನೆಗಳು ಗೋಡೆಯ ಮೇಲೆ ಇಟ್ಟಿರುವ ಮರದ ಜಂತಿಯ ಮೇಲೆ ಕೂರುತ್ತವೆ. ಉದ್ದ ಸರದ ಕೊನೆಗಳು ಮಾಡಿನ ಸರಕಟ್ಟಿನ ಮೇಲೆ ನಿಂತಿರುತ್ತವೆ. ಚಪ್ಪಟೆಯಾದ ಮಾಡು ಗೋಡೆಯಿಂದ ಗೋಡೆಗೆ ಹಾಕಿದ ಉಕ್ಕು ಇಲ್ಲವೆ ಮರದ ದೂಲಗಳ ಮೇಲೆ ನಿಲ್ಲಿಸಿದ ಅಟ್ಟದ ಹಾಗಿರುತ್ತದೆ.

ತೆಳುವಾದ ಕವಚದ ಮಾಡು ಒಂದು ಬಿಗಿಯಾದ ಮತ್ತು ಬಾಗಿದ ಪೊರೆ. ಅದು ಹೊರಗಿನಿಂದ ಬರುವ ರಭಸವನ್ನು ಎಳೆತದ ಮತ್ತು ಕುಗ್ಗುವ ಒತ್ತಡಗಳ ಮೂಲಕ ಎದುರಿಸುತ್ತದೆ.

ಕಟ್ಟಡಗಳಲ್ಲಿ ಉಪಯೋಗಿಸುವ ಕವಚಗಳು ಮೂರು ಬಗೆಯಾಗಿವೆ: 1 ಗೋಳಾಕಾರ-ಗುಮ್ಮಟ, 2 ಪೀಪಾಯಿಯ ಆಕಾರ, 3 ಪರವಲಯಕಲ್ಪ (ಪ್ಯರಬೊಲಾಯಿಡ್).

ತೆಳುವಾದ ಕವಚದ ರಚನೆಗೆ ಅತಿಪರವಲಯಕ ಪರವಲಯಕಲ್ಪದ (ಹೈಪರ್ಬಾಲಿಕ್ ಪ್ಯರಬೊಲಾಯಿಡ್) ಆಕೃತಿ ಚೆನ್ನಾಗಿ ಹೊಂದುತ್ತದೆ. ಆದರೆ ಅದರ ಹೊರ ಮೈಯನ್ನು ಸರಳ ರೇಖೆಗಳಿಂದ ಮಾಡಿರಬೇಕು. ಒಂದನ್ನೊಂದು ಕತ್ತರಿಸುವ ಈ ಆಕೃತಿಗಳನ್ನೂ ಈ ಆಕೃತಿಗಳ ಖಂಡಗಳನ್ನೂ ಜೋಡಿಸಿ ಒಂದೇ ಆಧಾರದಿಂದ ಚಾಚುತೊಲೆಗಳ ಹಾಗೆ ನೂಕಿದರೆ ಈ ರಮ್ಯವಾದ ಸಂವಿಧಾನದ ಎರಡು ಮಾದರಿಗಳು ದೊರೆಯುತ್ತವೆ.

ಉಬ್ಬು ತಗ್ಗುಗಳಿರುವ ಅಥವಾ ಪಕ್ಕಗಳೂ ಕೊನೆಗಳೂ ಬಾಗಿರುವ ಚಾವಣಿ ಮತ್ತು ಮಡಚಿದ ಅಥವಾ ತಗಡಿನ ಚಾವಣಿ-ಇವು ವಕ್ರಾಕಾರವಾಗಿಲ್ಲದೆ ಇರುವುದರಿಂದ ಕವಚಗಳಲ್ಲ. ಆದರೂ ಈ ಕಟ್ಟಡದ ಮಾದರಿಗಳಿಂದ ವಿಶಾಲವಾದ ಭಾಗಗಳಿಗೆ ತೆಳುವಾದ ಉಕ್ಕಿನ ರಚನೆಗಳಿಂದ ಮಾಡನ್ನು ಕಟ್ಟಬಹುದು.

ಮಾಡಿನ ಮೇಲೆ ಬರುವ ತ್ರಾಸ: ಮಾಡಿನ ಪ್ರತಿಯೊಂದು ಭಾಗವನ್ನೂ ಅದರ ಮೇಲೆ ಬರುವ ಗರಿಷ್ಠ ತ್ರಾಸವನ್ನು ತಡೆದುಕೊಳ್ಳುವಂತೆ ಸಂವಿಧಾನ ಮಾಡಬೇಕು. ಇದಕ್ಕಾಗಿ ಮೇಲೆ ಬರುವ ತೂಕದ ಗಾತ್ರ ಮತ್ತು ಸ್ಥಾನವನ್ನು ತಿಳಿದಿರಬೇಕು. ವಾಯುವಿನ ತೂಕ ಮಾಡಿನ ಇಳಿಕಲಿಗೆ ಅನುಗುಣವಾಗಿರುತ್ತದೆ.

ಗುಮ್ಮಟದ ಆಕಾರದ ಮಾಡುಗಳು : ಮರದ ತೊಲೆಗಳಿಂದ ಚೌಕಟ್ಟನ್ನು ಮಾಡಿ ಸಣ್ಣ ಗುಮ್ಮಟಗಳನ್ನು ಕಟ್ಟಬಹುದು. ಆದರೆ ದೊಡ್ಡ ಗುಮ್ಮಟಗಳನ್ನು ಉಕ್ಕಿನ ಚೌಕಟ್ಟಿನಿಂದ ಇಲ್ಲವೆ ಪ್ರಬಲಿತ ಕಾಂಕ್ರೀಟಿನಿಂದ ಕಟ್ಟಬೇಕಾಗುತ್ತದೆ. ಲಂಡನ್ನಿನ ಸೇಂಟ್ ಪಾಲ್ ಕೆಥೀಡ್ರಲ್ಲಿನ ಹೊರಗಿನ ಗುಮ್ಮಟವನ್ನು ಒಳಗಿನ ಇಟ್ಟಿಗೆಯ ಗುಮ್ಮಟದ ಮೇಲೆ ಎತ್ತಿದ ಶಂಕುವಿನ ಆಕಾರದ ಇಟ್ಟಿಗೆಯ ಕಟ್ಟಡದ ಆಧಾರದ ಮೇಲೆ ಸೀಸದಿಂದ ಮೇಲುಗಡೆ ಮುಚ್ಚಿದ ಮರದಿಂದ ಕಟ್ಟಿದ್ದಾರೆ.

ಈಗ ಪ್ರಬಲಿತ ಕಾಂಕ್ರೀಟು ಗುಮ್ಮಟಗಳ ರಚನೆಗೆ ಹೇಳಿಸಿದ ಸಾಮಗ್ರಿಯಾಗಿದೆ. ಈಚೆಗೆ ವೆಸ್ಟ್ ಮಿನ್‍ಸ್ಟರಿನಲ್ಲಿ ಒಂದು ಇಗರ್ಜಿಗೆ ಪ್ರಬಲಿತ ಕಾಂಕ್ರೀಟಿನ ಕಮಾನು ಚಾವಣಿಯನ್ನು ಉಪಯೋಗಿಸಿದ್ದಾರೆ. ಅದರ ವ್ಯಾಸ 18ಮೀ. ಚಿಮ್ಮುವ ಕಡೆ ಕಮಾನಿನ ಮಂದ 0.90ಮೀ ಇದ್ದು ನೆತ್ತಿಯಲ್ಲಿ 32 1/2 ಸೆಂ.ಮೀ.ಗೆ ಇಳಿಯುತ್ತದೆ. ಗುಮ್ಮಟವನ್ನು ಮೇಲುಗಡೆ 7.5 ಸೆಂ.ಮೀ ಮಂದದ ಕೃತಕವಾದ ಕಲ್ಲಿನ ಚಪ್ಪಡಿಗಳಿಂದ ಮುಚ್ಚಿದೆ. ಚಪ್ಪಡಿಗಳು ಕಮಾನಿನ ಮೇಲೆ 12.5ಸೆಂ.ಮಿ. ಆಳದ ಅರೀಯ ಬೆನ್ನುಪಟ್ಟಿಗಳ ಮೇಲೆ ನಿಂತಿರುವುದರಿಂದ ಬೆನ್ನುಪಟ್ಟಿಗಳಿಗೂ ಚಪ್ಪಡಿಗಳಿಗೂ ಮಧ್ಯೆ 5 ಸೆಂ.ಮೀ ವಾಯು ಆಡುವ ಜಾಗವಿದೆ. ಈ ಉಪಾಯದಿಂದ ಒಳಗಡೆಯ ಉಷ್ಣತೆ ಒಂದೇ ಸಮವಾಗಿರುತ್ತದೆ. ಈ ಗುಮ್ಮಟದ ಕೆಳಗಿನ ಆರಾಧನಾ ಮಂದಿರದ ಮೇಲುಗಡೆ ಮತ್ತೊಂದು ಸಣ್ಣ ಗುಮ್ಮಟವಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Harris, Cyril M. (editor). Dictionary of Architecture and Construction, Third Edition, New York, McGraw Hill, 2000, p. 775


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚಾವಣಿ&oldid=916524" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy