ಪಾಳಿ ಭಾಷೆ
ಪಾಳಿ ಭಾಷೆ - ಪಾಳಿ ಶಬ್ದಕ್ಕೆ ಬುದ್ಧ ಭಗವಾನರ ವಚನ ಅಥವಾ ಬುದ್ಧ ಭಗವಾನರ ಮೂಲ ಉಪದೇಶಗಳನ್ನೊಳಗೊಂಡ ತ್ರಿಪಿಟಕ ಗ್ರಂಥ ಸಮುದಾಯ ಎಂದು ಅರ್ಥ. ಸುಮಾರು ಕ್ರಿ. ಶ. 4-5 ನೆಯ ಶತಮಾನದಲ್ಲಿದ್ದ ಸುವಿಖ್ಯಾತ ಭಾಷ್ಯಾಕಾರ ಆಚಾರ್ಯ ಬುದ್ಧಘೋಷ ಪ್ರಮಾಣ ಗ್ರಂಥಗಳಾದ ತ್ರಿಪಿಟಕಗಳು ಇತರ ಧಾರ್ಮಿಕ ಗ್ರಂಥಗಳಿಂದ ಎಂದರೆ ಭಾಷ್ಯ, ಉಪಭಾಷ್ಯ ಇತಿಹಾಸಗಳು ಮುಂತಾದವುಗಳಿಂದ ಪ್ರತ್ಯೇಕವೆಂಬುದನ್ನು ಸೂಚಿಸುವುದಕ್ಕಾಗಿ ಈ ಮಾತನ್ನು ಪ್ರಯೋಗಿಸಿದರು. ವಿಶಾಲಾರ್ಥದಲ್ಲಿ ಹೇಳುವುದಾದರೆ ತ್ರಿಪಿಟಕದ ಭಾಷೆಯಲ್ಲಿ ರಚಿತವಾಗಿರುವ ಇಡೀ ಗ್ರಂಥಸ್ತೋಮದ-ಎಂದರೆ-ತ್ರಿಪಿಟಕ ಗ್ರಂಥಗಳೂ ಹಾಗೂ ಇತರ ಧಾರ್ಮಿಕ ಪ್ರಮಾಣ ಗ್ರಂಥಗಳ ಭಾಷೆಗೆ ಪಾಳಿ ಭಾಷೆ ಎಂಬ ಹೆಸರು ಬಂದಿದೆ.[೧]
ಪದ ನಿಷ್ಪತ್ತಿ
[ಬದಲಾಯಿಸಿ]ವ್ಯುತ್ಪತ್ತಿ : ಅಭಿಧಾನಪ್ರದೀಪಿಕಾ ಎಂಬ ಸುಖ್ಯಾತ ನಿಘಂಟಿನ ಪ್ರಕಾರ ಪಾಳಿ ಎಂದರೆ
- ತಂತಿ ಅಥವಾ ತಂತ್ರ (ಪ್ರಮಾಣ ಗ್ರಂಥ)
- ಬುದ್ಧ ವಚನ
- ಪಂಕ್ತಿ.
ಮುಂದಿನ ವಿವರಣೆ ಹೀಗಿದೆ : ಪಾ ಧಾತುವಿನ ಅರ್ಥ ಪಾಲಿಸುವುದು ಅಥವಾ ರಕ್ಷಿಸುವುದು. ಅಂದರೆ ಯಾವುದು ರಕ್ಷಿಸುವುದೋ, ಪಾಲಿಸುವುದೋ ಅದು ಪಾಳಿ. ಪಾಳಿ ಬುದ್ಧವಚನವನ್ನು ಪವಿತ್ರಗ್ರಂಥಗಳ ರೂಪದಲ್ಲಿ (ತಂತಿ) ಹಾಗೂ ಪ್ರಮಾಣಗ್ರಂಥಗಳ ರೂಪದಲ್ಲಿ ರಕ್ಷಿಸುತ್ತಿದೆ. ಪಾಳಿಪದದ ರೂಪನಿಷ್ಪತ್ತಿಯನ್ನು ಭಾಷಾಶಾಸ್ತ್ರಜ್ಞರು ಅನೇಕ ರೀತಿಗಳಲ್ಲಿ ವಿವರಿಸುತ್ತಾರೆ. ಆದರೆ ಪರಿಯಾಯ, ಪಾಠ, ಅಥವಾ ತಂತಿ ಈ ಮೂರರಲ್ಲಿ ಒಂದು ಮೂಲವಾಗಿರಬಹುದೆಂದು ಬಹುಮಟ್ಟಿಗೆ ಸಾಮಾನ್ಯವಾಗಿ ಅಂಗೀಕೃತವಾಗಿದೆ. ತ್ರಿಪಿಟಕದ ಅನೇಕ ಕಡೆಗಳಲ್ಲಿ ಮತ್ತೆ ಪರಿಯಾಯ ಶಬ್ದ ಬುದ್ಧ ವಚನಕ್ಕೆ ಪರ್ಯಾಯವಾಗಿ ಪ್ರಯೋಗವಾಗಿರುತ್ತದೆ. ಪರಿಯಾಯ ಪದ ಮುಂದೆ ಪಳಿಯಾಯ ಎಂಬ ರೂಪವನ್ನು ಪಡೆಯಿತೆಂದು ಅಶೋಕನ ಭಬ್ರುಶಾಸನದಿಂದ ವಿಧಿತವಾಗುತ್ತದೆ. ಕಾಲಕ್ರಮೇಣ ಪಳಿಯಾಯ ಪಾಳಿಯಾಯ ಆಯಿತು. ಪಾಳಿ ಇದರ ಸಂಕ್ಷಿಪ್ತ ರೂಪ. [೨]
ಪಾಠ
[ಬದಲಾಯಿಸಿ]ಪಾಠ ಎಂದರೆ ಧರ್ಮ ಗ್ರಂಥಗಳ ಪಠನ. ಪಾಠ ಮತ್ತು ಪಾಳಿ ಪದಗಳನ್ನು ಸಮಾನಾರ್ಥದಲ್ಲಿ ಒಂದರ ಸ್ಥಾನದಲ್ಲಿ ಇನ್ನೊಂದನ್ನು ಟೀಕುಗಳಲ್ಲಿ ಅನೇಕ ಕಡೆ ಉಪಯೋಗಿಸಲಾಗಿದೆ. ಇಂಡೋ ಆರ್ಯನ್ ಭಾಷೆಗಳಲ್ಲಿ ಧ್ವನಿವ್ಯತ್ಯಯ ಬಹುಸಾಮಾನ್ಯ. ಆದ್ದರಿಂದ ಪಾಠ ಎಂಬ ಪದ ಪಾಥ, ಪಾಳ, ಪಾಳಿ ರೂಪಾಂತರವನ್ನು ಹೊಂದಿರಬಹುದು. ಇದು ಸಾಮಾನ್ಯವಾಗಿ ನಿರೀಕ್ಷಿಸಬಹುದಾದ ಧ್ವನಿಪಲ್ಲಟ ಅಥವಾ ವರ್ಣಪಲ್ಲಟ.
ಪಂಕ್ತಿ
[ಬದಲಾಯಿಸಿ]ಈ ಮೊದಲೇ ತಿಳಿಸಿರುವಂತೆ ಪಾಳಿ ಶಬ್ದಕ್ಕೆ ಪಂಕ್ತಿ ಅಥವಾ ಸಂಪ್ರದಾಯ ಎನ್ನುವ ಅರ್ಥವೂ ಇದೆ. ಪಾಳಿ ಸಾಹಿತ್ಯದಲ್ಲಿ ಅಂಬಪಾಳಿ (ಮಾವಿನ ಮರಗಳ ಸಾಲು), ದಂತಪಾಳಿ (ಹಲ್ಲುಗಳ ಸಾಲು) ಎಂಬ ಪದಗಳು ಬಹುಕಡೆಯಲ್ಲಿ ಉಪಯೋಗವಾಗಿವೆ. ನೇರವಾಗಿ ಬಂದ ಪರಂಪರೆ ಮತ್ತು ಬುದ್ಧಭಗವಾನರಿಂದ ಆರಂಭವಾದ ಉಪದೇಶ ಸಂಪ್ರದಾಯ ಎಂಬ ಧ್ವನ್ಯಾರ್ಥ ಪಾಳಿ ಪದದಲ್ಲಿ ಅಡಗಿದೆ. ಬುದ್ಧಭಗವಾನರ ಉಪದೇಶ ಅದರ ಪರಿಶುದ್ಧ ರೂಪದಲ್ಲಿ ಪಾಳಿಗ್ರಂಥಗಳಲ್ಲಿ ಉಳಿದುಕೊಂಡಿದೆ. ಆದ್ದರಿಂದ ಭಗವಾನರ ಈ ಮೂಲ ಶುದ್ಧವಾದ ಬೋಧನಸಾಹಿತ್ಯ ಅಟ್ಠ ಕತೆಗಳೇ ಮುಂತಾದ ಇತರ ಸಾಹಿತ್ಯಪ್ರಕಾರಗಳಿಂದ ಬೇರೆಯಾದುದು ಎಂಬುವುದನ್ನು ಸೂಚಿಸಲು ಪಾಳಿ ಶಬ್ದವನ್ನು ಬಳಸಲಾಗುತ್ತಿದೆ.
ಪಾಳಿಗೆ ಇರುವ ಹೆಸರು
[ಬದಲಾಯಿಸಿ]ಪಾಳಿಗೆ ಮಾಗಧಿ, ಮಾಗಧಿ ಭಾಷಾ, ಮಾಗಧಿ ನಿರುಕ್ತಿ ಎಂಬ ಬೇರೆ ಹೆಸರುಗಳೂ ಉಂಟು. ಈ ಹೆಸರುಗಳು ಬೌದ್ಧ ಧರ್ಮದ ಮೂಲ ಸ್ಥಾನವಾದ ಮಗಧ ದೇಶ ಭಾಷೆಯೇ ಪಾಳಿ ಎಂಬುವುದನ್ನು ಸೂಚಿಸುತ್ತವೆ. ಮಾಗಧಿ ಭಾಷೆಯೂ ಪಾಳಿಯೂ ಒಂದೇ ಆಗಿರುವುದರಿಂದ ಮಾಗಧಿಗೆ ಮೂಲಭಾಷೆ ಎಂಬ ಹೆಸರೂ ಬಂದಿದೆ. ಕಚ್ಚಾಯನ ವ್ಯಾಕರಣದಲ್ಲಿ ಈ ಅಭಿಪ್ರಾಯವನ್ನು ಪುಷ್ಟೀಕರಿಸುವ ಒಂದು ವಾಕ್ಯವಿದೆ.
ಪಾಳಿ ಭಾಷೆಯ ಮೂಲ
[ಬದಲಾಯಿಸಿ]ಬೌದ್ಧಸಂಪ್ರದಾಯ ಮಗಧವನ್ನು ಪಾಳಿ ಭಾಷೆಯ ಮೂಲಸ್ಥಾನವೆಂದು ಪರಿಗಣಿಸುತ್ತದೆ. ಪಾಳಿ ಸಾಹಿತ್ಯದಲ್ಲಿ ಸಾಕಷ್ಟು ಸಂಶೋಧನೆಯಾಗದಿದ್ದ ಹಿಂದಿನ ಶತಮಾನದಲ್ಲಿ ಮತ್ತು ಶತಮಾನದ ಪೂರ್ವಪಾದದಲ್ಲಿ ಪಾಳಿ ಭಾಷೆಯ ಮೂಲಸ್ಥಾನದ ಬಗ್ಗೆ ಕೆಲವು ಪಾಶ್ಚಾತ್ಯ ಪಂಡಿತರು ವಿವಿಧ ಮತಗಳನ್ನು ಪ್ರತಿಪಾದಿಸಿದರು. ಉದಾಹರಣೆಗೆ, ಬುದ್ಧ ಭಗವಾನರು ಕೋಸಲದಲ್ಲಿ ಹುಟ್ಟಿದ್ದರಿಂದ ಅವರು ಕೋಸಲೀ ಭಾಷೆಯಲ್ಲಿ ಬೋಧನೆ ಮಾಡಿರಬೇಕು. ಆದ್ದರಿಂದ ಪಾಳಿಯ ಮೂಲ ಸ್ಥಾನ ಕೋಸಲವೇ ಆಗಿರಬೇಕು ಎಂದು ಡಾ. ರೈಸ್‍ಡೇವಿಡ್ಸ್ ಅಭಿಪ್ರಾಯಪಟ್ಟರು. ಆದರೆ ಬುದ್ಧಭಗವಾನರ ಪ್ರಮುಖ ಕಾರ್ಯಕ್ಷೇತ್ರ ಹಾಗೂ ಬೋಧನರಂಗ ಮಗಧ ಎಂಬುದು ಸುವಿದಿತ ಸಂಗತಿ. ಭಗವಾನರ ಉದ್ಧಾರಕಾರ್ಯ ವ್ಯವಸ್ಥಿತ ರೀತಿಯಲ್ಲಿ ಆರಂಭವಾದದ್ದು ಮಗಧದಲ್ಲಿಯೆ. ಮೇಲಾಗಿ ಬುದ್ಧಭಗವಾನರ ಕಾಲದಲ್ಲಿಯೇ ಕೋಸಲ ಮಗಧದಲ್ಲಿ ವಿಲೀನವಾಯಿತು. ಆದ್ದರಿಂದ ಮಾಗಧಿ ಕೋಸಲೀಯನ್ನು ಒಳಗೊಂಡಿದೆ. ಉತ್ತರ ಮತ್ತು ಮಧ್ಯಭಾರತದಲ್ಲಿ ಮಾಗಧಿ ಆಸ್ಥಾನ ಭಾಷೆಯಾದ ಮೇಲೆ (ರಾಜ್ಯ ಭಾಷೆ) ಅಂದು ಪ್ರಚಾರದಲ್ಲಿದ್ದ ಅನೇಕ ಸ್ಥಳೀಯ ಉಪಭಾಷೆಗಳ ಕೆಲವು ಅಂಶಗಳು ಅದರಲ್ಲಿ ಸೇರಿಹೋದವು. ಪಾಳಿಯಲ್ಲಿರುವ ಅನೇಕ ಪ್ರಭೇದಗಳಿಂದ ಇದು ಸ್ಥಿರಪಡುತ್ತದೆ. ಹೀಗಾಗಿ ಪಾಳಿ ಒಂದು ಸುಪುಷ್ಟ ಭಾಷೆಯಾಗಿ ಬೆಳೆಯಿತು. ಇಂದು ದೇಶದ ಬಹುಭಾಗದಲ್ಲಿ ಅದನ್ನು ಆಡುವ ರೀತಿಯಲ್ಲಿ ಅನೇಕ ವ್ಯತ್ಯಾಸಗಳಿದ್ದರೂ ಹಿಂದಿ ಅರ್ಥವಾಗುವಂತೆ, ಹಿಂದೆ ಮಾಗಧಿ ಎಲ್ಲರಿಗೂ ಅರ್ಥವಾಗುವಂಥ ಪ್ರಮಾಣ ಭಾಷೆಯಾಗಿತ್ತು. ವೆಸರ್‍ಗಾರ್ಡ್, ಕುನ್, ಓಲ್ಡನ್‍ಬರ್ಗ್, ಫ್ರಾಂಕ್ ಮತ್ತು ಸ್ಟೇನ್‍ಕೋನೋ ಮುಂತಾದ ವಿದ್ವಾಂಸರು ಅಶೋಕನ ಶಾಸನಗಳೊಡನೆ ಪಾಳಿಯನ್ನು ಹೋಲಿಸಿ ಪಾಳಿಯ ಮೂಲಸ್ಥಾನ ಯಾವುದಿರಬಹುದೆಂದು ಅನ್ವೇಷಿಸಿದರು. ಆದರೆ ಈ ಪ್ರಯತ್ನ ಅಷ್ಟೇನೂ ಯಶಸ್ವಿಯಾಗಲಿಲ್ಲ, ಗಿರ್ ನಾರಿನ ಶಾಸನಗಳು ಪಾಳಿಯನ್ನು ಬಹುವಾಗಿ ಹೋಲುವುದರಿಂದಲೂ ಸಿಂಹಳದಲ್ಲಿ ತ್ರಿಪಿಟಕ ಧರ್ಮವನ್ನು ಸ್ಥಾಪಿಸಿದ ಮಹೇಂದ್ರ ಉಜ್ಜಯನಿಗೆ ಸೇರಿದವನಾದ್ದರಿಂದಲೂ ಇವರಲ್ಲಿ ಕೆಲವರು ಉಜ್ಜಯಿನಿಯೇ ಪಾಳಿಯ ಮಾತೃಸ್ಥಾನವಾಗಿರಬೇಕೆಂದು ತಿಳಿದಿದ್ದರು. ಮಾತೃಸ್ಥಾನವಾದ ಭಾರತದಿಂದ ಕಣ್ಮರೆಯಾಗಿ ಅನೇಕ ವರ್ಷಗಳಾದ ಮೇಲೂ ಸಜೀವವಾಗಿ ಉಳಿದಿರುವ ದೇಶವೆಂದರೆ ಸಿಂಹಳ. ಇದಕ್ಕೆ ಭೌಗೋಳಿಕವಾಗಿಯೂ ಸಾಂಸ್ಕೃತಿಕವಾಗಿಯೂ ಹೆಚ್ಚು ಸಮೀಪದಲ್ಲಿರುವ ಕಳಿಂಗವೇ ಪಾಳಿಯ ಮೂಲಸ್ಥಾನವಾಗಿರಬೇಕೆಂದು ಓಲ್ಡನ್‍ಬರ್ಗ್ ಮತ್ತು ಇತರ ಕೆಲವರು ಬಗೆದರು. ಆಧುನಿಕ ಸಂಶೋಧನೆಗಳು ಈ ವಾದಗಳೆಲ್ಲವನ್ನೂ ಆಧಾರರಹಿತವೆಂದು ತಳ್ಳಿ ಹಾಕಿವೆ. ಈ ಶತಮಾನದಲ್ಲಿ ಪಾಶ್ಚಾತ್ಯ ಮತ್ತು ಭಾರತೀಯ ವಿದ್ವಾಂಸರು ಭಾರತೀಯ ಭಾಷಾಶಾಸ್ತ್ರದ ಕ್ಷೇತ್ರದಲ್ಲಿ ನಡೆಸಿದ ಸಂಶೋಧನೆಗಳು ನಿರ್ವಿವಾದ ಸತ್ಯಾಂಶಗಳನ್ನೊಳಗೊಂಡ ಫಲಿತಾಂಶಗಳನ್ನು ಬೆಳಕಿಗೆ ತಂದಿವೆ. ಗೇಗರ್ ವಿಂಟರ್ ನಿಟ್ಸ್, ಚೈಲ್ಡರ್ಸ್, ಎಲ್ವಿಸ್ (ಪೂಜ್ಯ) ಜಗದೀಶ್ ಕಶ್ಯಪ್, ಭರತ್‍ಸಿಂಗ್ ಉಪಾಧ್ಯಾಯ ಮುಂತಾದ ವಿಖ್ಯಾತ ಪಂಡಿತರು ಪಾಳಿಯ ಮಾತೃಸ್ಥಾನ ಮಗಧ ದೇಶ ಎಂಬುದನ್ನು ನಿರ್ಧರಿಸಿದ್ದಾರೆ.[೩]
ಪ್ರಮಾಣಯುತವಾದ ಜನಭಾಷೆ
[ಬದಲಾಯಿಸಿ]ಪಾಳಿಯ ಸ್ಥಾನಮಾನವೇನಿತ್ತೆಂಬುದನ್ನು ಈಗ ವಿವೇಚಿಸಬೇಕಾಗಿದೆ. ಅದು ಕೇವಲ ಜನರ ನಿತ್ಯದ ವ್ಯಾವಹಾರಿಕವಾದ ಪ್ರಾಂತೀಯ ಉಪಭಾಷೆಯಾಗಿದ್ದಿತೆ ಅಥವಾ ಪರಿಪುಷ್ಟವಾಗಿ ಬೆಳೆದ ಪ್ರಮಾಣಭೂತವಾದ ಮತ್ತು ಎಲ್ಲರಿಗೂ ಅರ್ಥವಾಗುತ್ತಿದ್ದ ದೇಶ ಭಾಷೆಯಾಗಿತ್ತೆ ? ಪಾಳಿ ಸಾಹಿತ್ಯದ ಶ್ರೇಷ್ಠತೆಯ ಬಗ್ಗೆ ಯಾವ ಸಂಶಯವೂ ಇರಲಾರದು. ಆ ಸಾಹಿತ್ಯವನ್ನು ಒಮ್ಮೆ ಸ್ಥೂಲವಾಗಿ ನೋಡಿದರೆ ಸಾಕು ಅದು ಎಷ್ಟು ಪರಿಷ್ಕಾರಯುತವೂ ಖಚಿತವೂ ಆದ ಪದಸಂಪತ್ತನ್ನು ಹೊಂದಿದೆ ಎಂಬುದೂ ಸ್ಪಷ್ಟವಾಗುತ್ತದೆ. ಅದು ಕೇವಲ ಗ್ರಾಮ್ಯ ಭಾಷೆಯಾಗಿರದೆ ಪರಿಷ್ಕಾರ ಹೊಂದಿದ ಜನರಲ್ಲಿ ರೂಢಿಯಲ್ಲಿದ್ದ ಭಾಷೆಯಾಗಿತ್ತೆಂಬುದಕ್ಕೆ ತ್ರಿಪಿಟಕ ಮುಂತಾದ ಧರ್ಮಗ್ರಂಥಗಳ ಪ್ರಮಾಣ ಒಂದೇ ಸಾಕು. ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾಗಿದ್ದು, ಛಂದಸ್ಸಿನ ಕಡೆಗೆ ಒಲವಿದ್ದ ಇಬ್ಬರು ಭಿಕ್ಷುಗಳು ಬುದ್ಧವಚನವನ್ನು ಕೇವಲ ಕೆಲ ಜನರಿಗೆ ಅರ್ಥವಾಗುತ್ತಿದ್ದ ವೇದಗಳ ಛಂದಸ್ಸಿನಲ್ಲಿ ಅನುವಾದಿಸಲು ಬುದ್ಧಭಗವಾನರ ಅನುಮತಿಯನ್ನು ಕೇಳುವ ಸಂದರ್ಭವೊಂದು ವಿನಯಪಿಟಕದಲ್ಲಿ ಬರುತ್ತದೆ. ಭಗವಾನರು ಈ ಸಲಹೆಯನ್ನು ಕೂಡಲೇ ತಿರಸ್ಕರಿಸಿದರು. ತಮ್ಮ ವಚನ ಜನರ ಭಾಷೆಯಾದ ಮತ್ತು ಅವರು ಬೋಧನೆ ಮಾಡುತ್ತಿದ್ದ ಮಾಗಧಿಯಲ್ಲೆ ಇರಬೇಕೆಂದು ತಮ್ಮ ವಚನವನ್ನು ಅದರ ಮೂಲಕವೇ ಅರಿಯಬೇಕೆಂದು ಅವರು ಸ್ಪಷ್ಟವಾಗಿ ತಿಳಿಸಿದರು. ಬುದ್ಧಭಗವಾನರ ಭಾಷೆಯಾದರೋ ಕೇವಲ ಜನಪ್ರಿಯ ಭಾಷೆ ಮಾತ್ರ ಆಗಿರಲಿಲ್ಲ. ಅದು ಭರತಖಂಡದ ವಿವಿಧ ಭಾಗಗಳ ಜನಸಂಪರ್ಕಕ್ಕೆ ಅಗತ್ಯವಾಗಿದ್ದ ಭಾಷೆಯಾಗಿ ಭಗವಾನರ ಕಾಲಕ್ಕೆ ಪೂರ್ವದಲ್ಲಿಯೇ ಅಸ್ತಿತ್ವಕ್ಕೆ ಬಂದಿತು ; ಅದು ಉಚ್ಚವರ್ಗದ ಜನರ ಭಾಷೆಯೂ ಆಗಿತ್ತು. ಸ್ವಾಭಾವಿಕವಾಗಿ ಇಂಥ ದೇಶಭಾಷೆ ಎಲ್ಲ ನುಡಿಗಳ ಅಂಶಗಳನ್ನು ಒಳಗೊಂಡಿರುತ್ತದೆ.[೪]
ಭಾಷಾ ವಿಜ್ಞಾನಿಗಳ ವಿವರಣೆ
[ಬದಲಾಯಿಸಿ]ಪಾಳಿ ಭಾಷೆ ಮಧ್ಯಕಾಲೀನ ಇಂಡೋ-ಆರ್ಯನ್ ಭಾಷೆಯ ಆದಿರೂಪ. ಗೈಗರ್ ಅವರ ಆಭಿಪ್ರಾಯದಂತೆ ಅದು ಬುದ್ಧಪೂರ್ವಯುಗಕ್ಕೆ ಸೇರಿದುದು. ಅಂದರೆ ಯಾಸ್ಕಾನಿಗೂ ಅವನನ್ನು ಉದಾಹರಿಸುವ ಪಾಣಿನಿಗೂ ಪೂರ್ವದ್ದು. ವಿಖ್ಯಾತ ವೈಯ್ಯಾಕರಣಿ. ಎ.ಎ. ಮ್ಯಾಕ್ಡೊನೆಲ್ ಸಂಸ್ಕೃತದಲ್ಲಿ ರಚಿತವಾಗಿರುವ ಅತೀ ಪುರಾತನ ವ್ಯಾಕರಣ ಗ್ರಂಥಗಳ ಕರ್ತೃಗಳಾದ ಯಾಸ್ಕ ಮತ್ತು ಪಾಣಿನಿಯವರ ಕಾಲಗಳನ್ನು ಕ್ರಮವಾಗಿ ಕ್ರಿ.ಪೂ. 500 ಮತ್ತು 300 ಎಂದು ನಿಷ್ಕರ್ಷಿಸಿದ್ದಾನೆ. ಅವರ ಅಭಿಪ್ರಾಯದಲ್ಲಿ ಪಾಳಿ ಸಂಸ್ಕೃತಕ್ಕಿಂತ ಪುರಾತನ ವಾದುದೆಂದು ಗಣಿಸಬಹುದಾಗಿದೆ. ಪಾಳಿ ವೇದ ಭಾಷೆಯ ಅನೇಕ ಲಕ್ಷಣಗಳನ್ನು ಉಳಿಸಿಕೊಂಡಿರುವುದೂ ಸಂಸ್ಕೃತ ಅವನ್ನು ಕಳೆದುಕೊಂಡಿರುವುದೂ ಈ ಆಭಿಪ್ರಾಯವನ್ನು ಸಮರ್ಥಿಸುತ್ತದೆ. ವಿವಿಧ ಪ್ರತ್ಯಯಗಳನ್ನು ಹೊಂದಿರುವುದು ವೇದ ಭಾಷೆಯ ವೈಶಿಷ್ಟ್ಯಗಳಲ್ಲೊಂದು. ಉದಾಹರಣೆಗೆ; ವೇದ ಭಾಷೆಯಲ್ಲಿನ ಅಕಾರಾಂತ ಶಬ್ದಗಳ ತೃತೀಯಾ ವಿಭಕ್ತಿಯ ಬಹುವಚನದ ಪ್ರತ್ಯಯ ಭಿಃ ಎಂಬುದು ಪಾಳಿಯಲ್ಲಿ ಉಳಿದುಕೊಂಡು ಸಂಸ್ಕೃತದಲ್ಲಿ ಕಳೆದು ಹೋಗಿದೆ. ವೇದ ಭಾಷೆಯ ಆಮ್ಬ ಪಾಳಿಯಲ್ಲಿ ಆಮ್ಬ ಆಗಿದ್ದು ಸಂಸ್ಕೃತದಲ್ಲಿ ಆಮ್ರ ಆಗಿ ರೂಪಾಂತರ ಹೊಂದಿದೆ ; ಪಾಳಿ ಬಕಾರವನ್ನು ಉಳಿಸಿಕೊಂಡಿದೆ. ಉತ್ತಮ ಪುರುಷ ಮತ್ತು ಪ್ರಥಮ ಪುರುಷ ಬಹು ವಚನ ಪ್ರತ್ಯಯಗಳಾದ ಮಸಿ ಮತ್ತು ರೆಗಳು ಪಾಳಿಯಲ್ಲಿ ಉಳಿದುಕೊಂಡಿವೆ ; ಸಂಸ್ಕೃತದಲ್ಲಿ ಲುಕ್ತವಾಗಿವೆ. ಪಾಣಿನಿಯ ವೇದ ಭಾಷೆಯ ವ್ಯಾಕರಣ ನಿಯಮದ ಪ್ರಕಾರ ಹ+ವರ್ಣ ಭ ಆಗುತ್ತದೆ. ಪಾಳಿ ಈ ನಿಯಮವನ್ನು ಉಳಿಸಿಕೊಂಡಿದೆ ; ಸಂಸ್ಕೃತ ತ್ಯಜಿಸಿದೆ. ಹೀಗೆಯೇ ವೇದ ಭಾಷೆಯಂತೆ ಸಪ್ತಮಿ-ಪ್ರಥಮಾ, ಷಷ್ಠಿಗಳ ನಡುವೆ (ಸುಪಾಜ್ಞ ವ್ಯತ್ಯಯ) ವಿಭಕ್ತಿ ಪಲ್ಲಟವಾಗುವುದು ಪಾಳಿಯಲ್ಲಿ ಅತೀ ಸಾಮಾನ್ಯ. ಸಂಸ್ಕೃತದಲ್ಲಾದರೋ ಇದು ನಿಷೇದಿಸಲ್ಪಟ್ಟಿದೆ. ವೇದ ಭಾಷೆಯಲ್ಲಿ ಕಂಡುಬರುವ ಸಂಭವನಾರೂಪಕ್ಕೆ ಸಮಾನವಾದವು ಪಾಳಿಯಲ್ಲಿ ಕಂಡುಬರುತ್ತವೆ. ಆದರೆ, ಇವು ಸಂಸ್ಕೃತದಲ್ಲಿ ಕಾಣಬರುವುದಿಲ್ಲ.[೫]
ಪಾಳಿ ವ್ಯಾಕರಣ
[ಬದಲಾಯಿಸಿ]ಪಾಳಿ ಭಾಷೆಯನ್ನು ಬರೆಯಲು ಈಗ ದೇವನಾಗರಿ ಮತ್ತು ತತ್ಸಂಬಧವಾದ ಲಿಪಿಗಳು, ಸಿಂಹಳೀ ಲಿಪಿ, ಬರ್ಮೀ ಲಿಪಿ, ಥಾಯ್ ಲಿಪಿ, ಲಾಬಸ್ ಲಿಪಿ, ಕಾಂಬೋಜ್ ಲಿಪಿ, ರೋಮನ್ ಲಿಪಿ ಮುಂತಾದ ಅನೇಕ ಲಿಪಿಗಳನ್ನು ಉಪಯೋಗಿಸಲಾಗುತ್ತಿದೆ. ವಿವಿಧ ಬೌದ್ಧ ರಾಷ್ಟ್ರಗಳಲ್ಲಿ ಧರ್ಮ ಗ್ರಂಥಗಳ ಭಾಷೆಯಾಗಿರುವುದಲ್ಲದೆ ಪಾಳಿ ಭಾರತ ಸಂಸ್ಕೃತಿಯ ಅಧ್ಯಯನದ ಪ್ರಮುಖ ಭಾಷೆಗಳಲ್ಲೊಂದಾಗಿರುವುದರಿಂದ ಅದು ಪ್ರಚಾರದಲ್ಲಿರುವ ಬೇರೆಬೇರೆ ಭಾಗಗಳಲ್ಲಿ ಬೇರೆ ಬೇರೆ ಲಿಪಿಗಳನ್ನು ಬಳಸಲಾಗುತ್ತಿದೆ. ಪಾಳಿ ವರ್ಣಮಾಲೆಯಲ್ಲಿ 41 ಅಕ್ಷರಗಳಿವೆ. ಇವುಗಳಲ್ಲಿ 8 ಸ್ವರಗಳು, ಉಳಿದ ಮೂವತ್ಮೂರು ವ್ಯಂಜನಗಳು. ಸಂಸ್ಕೃತದಲ್ಲಾದರೋ 13 ಸ್ವರಗಳು, 35 ವ್ಯಂಜನಗಳು ಸೇರಿ 48 ಅಕ್ಷರಗಳಿವೆ.
ಪಾಳಿ ವರ್ಣಮಾಲೆ
[ಬದಲಾಯಿಸಿ]- ಸ್ವರಗಳು : ಅ ಆ ಇ ಈ ಉ ಊ ಏ ಓ
- ವ್ಯಂಜನಗಳು : ವರ್ಗೀಯ ವ್ಯಂಜನಗಳು
- ವರ್ಗ ೧ : ಕ ಖ ಗ ಘ ಙ
- ವರ್ಗ ೨ : ಚ ಛ ಜ ಝ ಞ
- ವರ್ಗ ೩ : ಟ ಠ ಡ ಢ ಣ
- ವರ್ಗ ೪ : ತ ಥ ದ ಧ ನ
- ವರ್ಗ ೫ : ಪ ಫ ಬ ಭ ಮ
- ಯ ರ ಲ ವ ಸ ಹ ಳ ಅಙ
ಭಾಷೆಯನ್ನು ಸರಳಗೊಳಿಸಲು ವರ್ಣಮಾಲೆ ಸುಧಾರಣೆಯಾಗಿರುವುದು ಮೇಲಿನದರಿಂದ ವ್ಯಕ್ತವಾಗುತ್ತದೆ. ವೇದ ಭಾಷೆಯ ಮತ್ತು ಸಂಸ್ಕೃತದ ಸಂಯುಕ್ತ ಸ್ವರಗಳಾದ ಐ. ಔಕಾರಗಳು ಏ ಓಕಾರಗಳಲ್ಲಿ ಸೇರಿಹೋಗಿವೆ ; ಋಕಾರ ಅ ಇ ಮತ್ತು ಉಕಾರಗಳಲ್ಲಿ ಲೀನವಾಗಿದೆ. ಅಂತೆಯೇ ವ್ಯಂಜನಗಳಾದ ಶ ಷ ಸಗಳು ಸಕಾರದಲ್ಲಿ ಸಮಾವೇಶಗೊಂಡಿವೆ. ಈ ವರ್ಣಮಾಲೆಯಲ್ಲಿ ವಿಸರ್ಗವಿಲ್ಲ. ಅನುಸ್ವಾರ ಅಙ ನಲ್ಲಿ ಸೇರಿದೆ. ವೇದ ಭಾಷೆ ಮತ್ತು ಸಂಸ್ಕೃತಗಳಲ್ಲಿ ಬಹು ಸಾಮಾನ್ಯವಾಗಿ ಕಂಡುಬರುವ ಅವಗ್ರಹ (S) ಸಂಜ್ಞೆ ಪಾಳಿಯಲ್ಲಿಲ್ಲ. ಸಂಯುಕ್ತಾಕ್ಷರಗಳೆಲ್ಲವೂ ಸವರ್ಣ ಗುಣಿತಾಕ್ಷರಗಳಾಗಿ ಮಾರ್ಪಾಟಾಗಿವೆ. ಉದಾಹರಣೆಗೆ ಧರ್ಮ ಪಾಳಿಯಲ್ಲಿ ಧಮ್ಮ ಆಗಿದೆ. ವ್ಯಂಜನಗಳು ಅಂತ್ಯದಲ್ಲಿದ್ದಾಗ ಅವು ಲೋಪವಾಗುತ್ತವೆ. ಉದಾ : ವಿದ್ಯುತ್ (ಸಂ)-ವಿಜ್ಜು (ಪಾ).
ದ್ವಿವಚನವಿಲ್ಲದಿರುವುದರಿಂದ ಭಾಷೆ ಬಹು ಸರಳ ರೂಪದಲ್ಲಿದೆ. ವಿಭಕ್ತಿ ರೂಪದಲ್ಲಿ ಚತುರ್ಥಿ ಮತ್ತು ಷಷ್ಠೀ ವಿಭಕ್ತಿಗಳು ಒಂದೇ ಆಗಿವೆ ; ಪ್ರಯೋಗದಲ್ಲೂ ಅವುಗಳಿಗೆ ಹೆಚ್ಚು ವ್ಯತ್ಯಾಸವಿಲ್ಲ. ವರ್ಣಮಾಲೆಯೂ ಸರಳಗೊಂಡಿರುವುದರಿಂದ ಬೇರೆ ಬೇರೆ ಅಂತ್ಯಾಕ್ಷರಗಳ ವಿಭಕ್ತಿ ಪ್ರತ್ಯಯಗಳ ಸಂಖ್ಯೆ ಕಡಿಮೆಯಾಗಿದೆ. ವಿದ್ಯಾ ಪದದ ಏಕ ವಚನದ ರೂಪಗಳು ಇವನ್ನು ಸ್ಪಷ್ಟಪಡಿಸುತ್ತದೆ.
ವಿಭಕ್ತಿಗಳು | ಸಂಸ್ಕೃತ | ಪಾಳಿ |
---|---|---|
ಪ್ರಥಮ | ವಿದ್ಯಾ | ವಿಜ್ಜಾ |
ದ್ವಿತೀಯ | ವಿದ್ಯಂ | ವಿಜ್ಜಙï |
ತೃತೀಯಾ | ವಿದ್ಯಾಯ | ವಿಜ್ಜಾಯ |
ಚತುರ್ಥಿ | ವಿದ್ಯಾಯೈ | ವಿಜ್ಜಾಯ |
ಪಂಚಮೀ | ವಿದ್ಯಾ ಃ | |
ಷಷ್ಠೀ | ವಿದ್ಯಾ ಃ | |
ಸಪ್ತಮೀ | ವಿದ್ಯಾಯಂ | (ವಿಜ್ಜಾಯಙï) |
ಸಂಬೋಧನ | ವಿದ್ಯೇ | ವಿಜ್ಜೀ |
ನಾಮಪದ ವ್ಯಾಕರಣ ದೃಷ್ಟಿಯಿಂದ ಗುಣವಾಚಕ, ಸರ್ವನಾಮ ಮತ್ತು ಸಂಖ್ಯಾವಾಚಕಗಳನ್ನೊಳಗೊಂಡಿದೆ. ಪದ ರಚನೆಯಲ್ಲೂ ಅರ್ಥ ಮಾಡುವಾಗಲೂ ಉಪಸರ್ಗಕ್ಕೆ ಮಹತ್ವದ ಪಾತ್ರವಿದೆ.
ಕ್ರಿಯಾಪದಗಳು
[ಬದಲಾಯಿಸಿ]ಮುಖ್ಯವಾಗಿ ದ್ವಿವಚನವಿಲ್ಲದ್ದರಿಂದ ಪಾಳಿಗೂ ಸಂಸ್ಕೃತಕ್ಕೂ ವ್ಯತ್ಯಾಸ ಬಹಳ. ಸಂಸ್ಕೃತದ ಪ್ರತ್ಯಯ ರಹಿತ ಧಾತುಗಳು ಪಾಳಿಯಲ್ಲಿ ಪ್ರತ್ಯಯಗಳನ್ನು ಒಳಗೊಳ್ಳಬಹುದಾದ ಧಾತುಗಳಾಗಿವೆ. ಹೀಗೆ ಸೇರುವಾಗ ಧಾತು ಮತ್ತು ಪ್ರತ್ಯಯಗಳೆರಡೂ ತಮ್ಮ ಹಿಂದಿನ ರೂಪಗಳನ್ನು ಉಳಿಸಿಕೊಳ್ಳುತ್ತವೆ. ಅತ್ತನೋ ಪದ ಲುಪ್ತವಾಗಿ ಹೋಗುತ್ತಿದೆ. ಭಾಷೆ ಬೆಳೆದಂತೆಲ್ಲಾ ಇದರ ಉಪಯೋಗ ಕಡಿಮೆಯಾಗುತ್ತಿದೆ. ವೇದ ಭಾಷೆಯ ಸಂಭವನಾರೂಪ ವರ್ತಮಾನ, ವಿಧಿ, ಆಶೀಃ ರೂಪಗಳಲ್ಲಿ ಪಾಳಿಯಲ್ಲಿ ಉಳಿದುಕೊಂಡಿದೆ. ಪೂರ್ಣ ಮತ್ತು ಅಪೂರ್ಣ ಕ್ರಿಯೆಗಳನ್ನು ತೋರಿಸುವ ಕಾಲಗಳು ಪಾಳಿಯಲ್ಲಿ ಬಳಕೆಯಲ್ಲಿಲ್ಲ. ಪೂರ್ಣಕ್ರಿಯಾ ಪದಗಳಿಗೆ ಬದಲು ಅಪೂರ್ಣ ಪದಗಳ ಅಥವಾ ಪದಪುಂಜಗಳ ಹೇರಳವಾದ ಪ್ರಯೋಗ ಕಂಡುಬರುತ್ತದೆ. ವ್ಯಾಕರಣ ದೃಷ್ಟಿಯಿಂದ ಮಾತ್ರ ಲಿಂಗ ವಿವಕ್ಷೆಗೆ ಪ್ರಾಶಸ್ತ್ಯವಿದೆ.
ಶಬ್ದಸಂಪತ್ತು
[ಬದಲಾಯಿಸಿ]ಪಾಳಿಯ ಶಬ್ದಗಳು ಪ್ರಾಚೀನ ವೈದಿಕ ಭಾಷೆಯಿಂದ ಬಂದವಾದರೂ ಹೊಸ ಪದಗಳನ್ನು ಉತ್ಪತ್ತಿ ಮಾಡುವ ಮತ್ತು ಹಳೆಯ ಪದಗಳಿಗೆ ಹೊಸ ಅರ್ಥವನ್ನು ಕೊಡುವ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತದೆ. ಅರಿಯ (ವೈಧಿಕ ಭಾಷೆಯ ಆರ್ಯ). ಸಚ್ಚ (ಸತ್ಯ), ನಿಬ್ಬಾಣ (ನಿರ್ವಾಣ), ಮೊಕ್ಕ (ಮೋಕ್ಷ), ದುಕ್ಕ (ದುಃಖ), ಧರ್ಮ (ಧಮ್ಮ) ಮುಂತಾದ ಪದಗಳು ವೈದಿಕ ಮತ್ತು ಸಂಸ್ಕೃತ ಭಾಷೆಗಳಲ್ಲಿರುವುದಕ್ಕಿಂತ ಭಿನ್ನವಾದ ಅರ್ಥವನ್ನು ಹೊಂದಿವೆ. ಚತುಸಚ್ಚ (ಚತುರಾರ್ಯಸತ್ಯ) ಅಥವಾ ಅರಿಯ ಅಟ್ಟಂಗಿಕ ಮಗ್ಗ (ಆರ್ಯ ಅಷ್ಟಾಂಗಿಕ ಮಾರ್ಗ) ಮುಂತಾದ ಪದ ವಿಶೇಷಗಳಲ್ಲಿ ಅಡಗಿರುವ ಭಾವ ಪಾಳಿಗೇ ಮೀಸಲಾಗಿದ್ದು ಆ ಭಾವಗಳು ಸಂಸ್ಕೃತದಲ್ಲಾಗಲೀ ವೈದಿಕ ಭಾಷೆಯಲ್ಲಾಗಲೀ ಕಂಡು ಬರುವುದಿಲ್ಲ. ಕಮ್ಮ ಮತ್ತು ಪುನರುತ್ಪತ್ತಿ (ಕರ್ಮ ಮತ್ತು ಪುನರುತ್ಪತ್ತಿ) ಮುಂತಾದ ಪದಗಳು ಕೂಡ ವೈಧಿಕ ಮತ್ತು ಸಂಸ್ಕೃತದಲ್ಲಿ ಅವುಗಳಿಗಿರುವ ಅರ್ಥಕ್ಕಿಂತ ಭಿನ್ನವಾದ ಅರ್ಥವನ್ನು ಪಡೆದುಕೊಂಡಿವೆ. ವೈದಿಕ ಸಂಸ್ಕೃತ ವಾಙ್ಮಯದಲ್ಲಿ ದುಃಖ ಎನ್ನುವ ಶಬ್ದ ಭೌತಿಕ ವೇದನೆಗೆ ಸಂಬಂಧಿಸಿದ ಅರ್ಥವನ್ನು ಸೂಚಿಸುತ್ತದೆ. ಪಾಳಿಯಲ್ಲಾದರೋ ಅದಕ್ಕೆ ವ್ಯಾಪಕವೂ ಆಳವೂ ಆದ ಅರ್ಥವಿದೆ. ಅದು ಒಂದು ವಿಶ್ವ ತತ್ತ್ವವನ್ನು ಸೂಚಿಸುವ ವಿಶಿಷ್ಟಾರ್ಥವನ್ನು ಪಡೆದುಕೊಂಡಿದೆ ; ಸರ್ವವೂ ಕ್ಷಣಿಕವಾದದು. ಅಸಮರ್ಪಕವಾದದು, ಭಯ ಮೂಲವಾದದು, ಅಶುಭವಾದುದು ಮತ್ತು ಮುಖ್ಯವಾಗಿ ತಿರುಳಿಲ್ಲದ್ದು ಎಂಬ ಮನಶಾಸ್ತ್ರಧಾರಿ ವಿಶ್ವ ತತ್ತ್ವವನ್ನು ರೂಪಿಸುತ್ತದೆ.
ಬೆಳವಣಿಗೆ ಹಂತಗಳು
[ಬದಲಾಯಿಸಿ]ಕೇವಲ ಧಾರ್ಮಿಕ ಗ್ರಂಥಗಳ ಭಾಷೆಯಾಗಿದ್ದ ಪಾಳಿ ಕಾಲಕ್ರಮೇಣ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಉಪಯೋಗಿಸಬಹುದಾದಂಥ ಭಾಷೆಯಾಗಿ ಪರಿವರ್ತನೆ ಹೊಂದಿತು. ಈ ಪರಿವರ್ತನೆ ನಾಲ್ಕು ಹಂತಗಳಲ್ಲಾಗಿದೆ. ಅವು ಹೀಗಿವೆ ;
- ಪ್ರಮಾಣ ಗ್ರಂಥಗಳ ಪದ್ಯ ಭಾಷೆ : ಸುತ್ತ ನಿಪಾತ ಮುಂತಾದ ಗ್ರಂಥಗಳಲ್ಲಿ ಕಂಡುಬರುವ ಅತ್ಯಂತ ಪ್ರಾಚೀನ ಪದರೂಪಗಳು ಈ ಭಾಷೆಯಲ್ಲಿ ಇಲ್ಲ. ಅಂದರೆ ಪಾಳಿ ಒಳಭೇದಗಳಲ್ಲಿನ ಪದಗಳನ್ನೂ ಪ್ರಾಚೀನ ವೈದಿಕ ಭಾಷೆಯ ಹೆಚ್ಚು ಪದಗಳನ್ನು ಅವುಗಳ ವಿವಿಧ ಪ್ರತ್ಯಯಗಳ ರೂಪಗಳನ್ನೂ ಒಳಗೊಂಡಿರುವ ಮಿಶ್ರಣವಾಗಿದೆ.
- ಪ್ರಮಾಣ ಗ್ರಂಥಗಳಲ್ಲಿನ ಗದ್ಯಭಾಷೆ : ಕಠಿಣವಾದ ನಿಯಮಗಳಿಗೆ ಅನುಗುಣವಾಗಿ ಉಂಟಾದ ನೂತನ ಪದಗಳನ್ನೊಳಗೊಂಡ ಈ ಭಾಷೆಯಲ್ಲಿ ಹೆಚ್ಚು ಸಮರೂಪತೆ ಇದೆ. ಹೆಚ್ಚು ಏಕರೂಪತೆ ಇದೆ. ಪ್ರಾಚೀನ ಶಬ್ದಗಳ ಪ್ರಯೋಗವಿದೆ. ಆದರೆ, ಅವುಗಳ ಸಂಖ್ಯೆ ಕಡಿಮೆ.
- ಪ್ರಮಾಣ ಗ್ರಂಥಗಳ ತರುವಾಯ ರಚಿತವಾದ ಗ್ರಂಥಗಳ ಗದ್ಯಭಾಷೆ : ಮಿಲಿಂದ ಪನ್ಹ ಮತ್ತು ಅಟ್ಠ ಕತೆಗಳಂಥ ಪ್ರೌಢ ಗ್ರಂಥಗಳಲ್ಲಿ ಕಂಡುಬರುವ ಭಾಷೆ. ಈ ಭಾಷೆ ಅಲಂಕಾರಿಕವಾಗಿಯೂ ಹೆಚ್ಚು ನಿಯಮಬದ್ಧ ವಾಗಿಯೂ ಬೆಳೆಯುತ್ತಿರುವುದು ಕಂಡುಬರುತ್ತದೆ. ಪ್ರಾಚೀನ ಪದಗಳ ಸಂಖ್ಯೆ ಬಹುಕಡಿಮೆ.
- ಪ್ರಮಾಣ ಗ್ರಂಥಗಳಿಂದ ಈಚಿನ ಕಾಲದ ಸಾಹಿತ್ಯ ಗ್ರಂಥಗಳ ಭಾಷೆ : ಕೊನೆಯ ಕಾಲದ ಈ ಭಾಷೆಯಲ್ಲಿ ಪ್ರತಿಭೆಗಿಂತ ಪಾಂಡಿತ್ಯ ಹೆಚ್ಚಾಗಿ ಕಂಡುಬರುತ್ತದೆ. ಇದು ಪ್ರಾಚೀನ ಮತ್ತು ಅರ್ವಾಚೀನ ಪದಗಳ ಮಿಶ್ರಣವಾಗಿರುವುದರಿಂದ ಗದ್ಯ ಪದ್ಯಗಳೆರಡರಲ್ಲೂ ಕೃತಕತೆ ಕಂಡುಬರುತ್ತದೆ. ಸಂಸ್ಕøತದ ಪ್ರಭಾವ ಸ್ಪಷ್ಟವಾಗಿ ಕಂಡುಬಂದು ಪಾಳಿ ಸಂಸ್ಕೃತದ ಒಂದು ಶಾಖೆ ಎಂಬ ವಿಚಿತ್ರ ಭಾವನೆಗೆ ಎಡೆಗೊಟ್ಟಿದೆ. ಉಪವ್ಯಾಖ್ಯಾನ ಗ್ರಂಥಗಳಲ್ಲಿ, ಇತಿಹಾಸ ಗ್ರಂಥಗಳಲ್ಲಿ, ಮಹಾಕಾವ್ಯಗಳಲ್ಲಿ ಕಂಡುಬರುವ ಭಾಷೆ ಇದು. ಆದರೆ, ಪಾಳಿ ಇನ್ನೂ ಬೆಳೆಯುತ್ತಿರುವ ಭಾಷೆ. ಜೊತೆಗೆ ಬೌದ್ಧ ದೇಶಗಳಲ್ಲಿ ಅಂದು ಇಂದೂ ವ್ಯಾವಹಾರಿಕ ಭಾಷೆಯಾಗಿದ್ದು ಜೀವಂತವಾಗಿದೆ. ವಿವಿಧ ದೇಶದ ಭಿಕ್ಷುಗಳು ಪರಸ್ಪರ ಸಂಧಿಸಿದಾಗ ಮಾತನಾಡಲು ಪಾಳಿಯನ್ನು ಬಳಸುತ್ತಾರೆ.
ಉಲ್ಲೇಖ
[ಬದಲಾಯಿಸಿ]- ↑ https://kn.wikisource.org/w/index.php?title=ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಪಾಳಿ_ಭಾಷೆ&action=edit
- ↑ http://www.vridhamma.org/Pali-Overview-94-Seminar
- ↑ https://www.britannica.com/topic/Pali-language
- ↑ https://www.omniglot.com/writing/pali.htm
- ↑ http://www.differencebetween.net/miscellaneous/culture-miscellaneous/difference-between-sanskrit-and-pali/