ವಿಷಯಕ್ಕೆ ಹೋಗು

ಕಡಲ ಹೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Sea anemones
A selection of sea anemones,
painted by Giacomo Merculiano, 1893
Scientific classification e
Unrecognized taxon (fix): Actiniaria
Suborders
Diversity
46 families

ಕಡಲ ಹೂ ಕುಟುಕು ಕಣವಂತ (ಸೀಲೆಂಟರೇಟ) ವಂಶಕ್ಕೆ ಸೇರಿದ ಒಂದು ಸಮುದ್ರವಾಸಿ (ಸೀ ಆನಿಮೊನಿ). ಆಂಥೊಜೋವ ವರ್ಗಕ್ಕೂ ಹೆಕ್ಸಕೊರಾಲಿಯ ಉಪವರ್ಗಕ್ಕೂ ಸೇರಿದೆ. ಮಧ್ಯೆ ಬಾಯಿಯುಳ್ಳ ಒಂದು ತಟ್ಟೆಯ ಸುತ್ತ ಹೂದಳಗಳಂತೆ ಜೋಡಿಸಿರುವ ಕೋಡುಬಳ್ಳಿಗಳಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ಪ್ರಭೇದಗಳು

[ಬದಲಾಯಿಸಿ]

ಸು.1,000 ಪ್ರಭೇದಗಳುಳ್ಳ ಇದರ ಬಳಗ ಸಮುದ್ರ ದಂಡೆಯಿಂದ 22,000”ಗಳ ಆಳದ ವರೆಗೂ ವಿಸ್ತರಿಸಿದೆ. ವೈವಿಧ್ಯಮಯ ವರ್ಣ ವಿನ್ಯಾಸಗಳಿಂದ ಕೂಡಿದ ಈ ಸಮುದ್ರಜೀವಿಗಳು ನೋಡಲು ಬಲು ಆಕರ್ಷಕ.

ಇವುಗಳಲ್ಲಿ ಏಕಾಂತ ಜೀವಿಗಳೇ ಹೇರಳವಾಗಿದ್ದರೂ ಕೂಡುಜೀವಿ, ಸಹಜೀವಿ, ಸಾಮೂಹಿಕ ಜೀವಿ ಮತ್ತು ಪರತಂತ್ರಜೀವಿಗಳೂ ಇಲ್ಲದೇ ಇಲ್ಲ. ಸ್ವಾಭಾವಿಕವಾಗಿ ಇವು ಸ್ಥಾವರ ಜೀವಿಗಳು. ಕಡಲತಳ ದಲ್ಲಿರುವ ಶಂಖ, ಕಪ್ಪೆಚಿಪ್ಪು, ಕಲ್ಲು ಮುಂತಾದುವುಗಳಿಗೆ ಅಂಟಿಕೊಂಡಿರುತ್ತವೆ. ಆದರೆ ಕೆಲವು ಪ್ರಾಣಿಗಳು ಮಂದಗಾಮಿಗಳಂತೆ ತೆವಳುವುದೂ ಮತ್ತೆ ಕೆಲವು ಕೋಡುಬಳ್ಳಿಗಳ ಬಡಿತದಿಂದ ನಿಧಾನವಾಗಿ ಈಜುವುದೂ ಉಂಟು.

ಲಕ್ಷಣಗಳು

[ಬದಲಾಯಿಸಿ]

ಇವುಗಳ ದೇಹ ಕೊಳವೆಯಂತಿದೆ. ಆಧಾರಕ್ಕೆ ಅಂಟಿರುವ ಭಾಗವನ್ನು ಪಾದ ಅಥವಾ ಬುಡ (ಪೀಡಲ್ ಡಿಸ್ಕ್‌) ಎಂತಲೂ ಮೇಲ್ತುದಿಯ ಭಾಗವನ್ನು ಬಾಯ ತಟ್ಟೆ (ಓರಲ್ ಡಿಸ್ಕ್‌) ಎಂತಲೂ ಇವೆರಡರ ಮಧ್ಯೆ ಇರುವ ಭಾಗವನ್ನು ಕಂಬ (ಕಾಲಮ್) ಎಂತಲೂ ಇದರ ದೇಹವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಬಾಯ ತಟ್ಟೆಯ ಮಧ್ಯದಲ್ಲಿ ಸೀಳಿನಂಥ ಬಾಯೂ ಅಂಚಿನಲ್ಲಿ ಒಂದು ಅಥವಾ ಹಲವು ಸುತ್ತುಗಳಲ್ಲಿ ಜೋಡಿಸಿರುವ ಬೆರಳುಗಳಂಥ ಟೊಳ್ಳಾದ ಕೋಡುಬಳ್ಳಿಗಳೂ (ಟೆಂಟಿಕಲ್) ಇವೆ. ಎಲ್ಲ ಕಡಲಹೂಗಳಲ್ಲೂ ಕೋಡುಬಳ್ಳಿಗಳ ಸಂಖ್ಯೆ ಆರು ಅಥವಾ ಆರರ ಗುಣಕದಲ್ಲಿರುತ್ತದೆ. ಪ್ರತಿಯೊಂದು ಕೋಡುಬಳ್ಳಿಯಲ್ಲಿಯೂ ಅಸಂಖ್ಯಾತವಾದ ಕುಟುಕು ಕಣಗಳಿವೆ (ನಿಮ್ಯಾಟೊಸಿಸ್ಟ್‌್ಸ). ಬಾಯಿಯಿಂದ ಹೊರಟ ಚಿಕ್ಕ ಗಂಟಲು ನಾಳ (ಗಲೆಟ್ ಅಥವಾ ಸ್ಟೊಮೋಡಿಯಂ) ಶರೀರಸ್ತಂಭವ ಒಳಭಾಗದಲ್ಲಿ ಜೋತು ಬಿದ್ದಿದೆ. ಇದರ ಇಕ್ಕಡೆಗಳಲ್ಲೂ ಒಂದು ಅಥವಾ ಎರಡು ನೀರ್ನಳಿಕೆಗಳಿವೆ (ಸೈಫನೊಗ್ಲಿಫ್). ಈ ನಳಿಕೆಗಳಲ್ಲಿರುವ ಶಿಲಕೆಗಳ ಬಡಿತದಿಂದ ಆವಶ್ಯಕಾಂಶಗಳನ್ನು ಹೊತ್ತ ನೀರಿನ ಪ್ರವಾಹ ಒಂದು ನಳಿಕೆಯ (ಸಲ್ಕಸ್) ಮೂಲಕ ಒಳಹೊಕ್ಕು ಮತ್ತೊಂದರ ಮೂಲಕ (ಸಲ್ಕ್ಯೂಲಸ್) ತ್ಯಾಜ್ಯ ವಸ್ತುಗಳಿಂದ ಕೂಡಿ ಹೊರಬರುತ್ತದೆ. ಈ ಜಲಾಭಿಸರಣಿಯಿಂದ ಅನಿಲಗಳ ವಿನಿಮಯಕ್ಕೂ ಸಹಾಯವಾಗುವುದು. ಕಡಲ ಹೂ ಇಪ್ಪದರಗಳ ಜೀವಿ. ಹೊರಚರ್ಮವೂ ಒಳಚರ್ಮವೂ ತನ್ಮಧ್ಯೆ ಮಂದವಾಗಿ ಬೆಳೆದಿರುವ ಮಿಸೋಗ್ಲಿಯವೂ ಶರೀರಸ್ತಂಭದ ಕೇಂದ್ರದಲ್ಲಿರುವ ಜಠರ ಸಂವಹನಿ ಡೊಗರನ್ನು (ಗಾಸ್ಟ್ರೊವ್ಯಾಸ್ಯುಲರ್ ಕ್ಯಾವಿಟಿ) ಸುತ್ತುವರಿದಿವೆ. ಈ ಡೊಗರಿನಲ್ಲಿ ಜೋಲಾಡುತ್ತಿರುವ ಗಂಟಲ ನಾಳ 6 ಜೊತೆ ನಡುತಡಿಕೆಗಳಿಂದ ಶರೀರದ ಗೋಡೆಗೆ ಅಂಟಿರುತ್ತದೆ. ನಡುತಡಿಕೆಗಳು, ಕೋಡುಗಳಂತೆ, 6ರ ಆವರ್ತಗಳಲ್ಲಿ ಜೊತೆಜೊತೆಯಾಗಿ ಬೆಳೆದು ಡೊಗರನ್ನು ಅನೇಕ ಕೋಣೆಗಳಾಗಿ ವಿಭಾಗ ಮಾಡಿವೆ. ಆದರೆ ಇವುಗಳಲ್ಲಿರುವ ದ್ವಾರಗಳಿಂದ ಕೋಣೆಗಳ ಅಂತಸ್ಸಂಪರ್ಕಕ್ಕೆ ಅವಕಾಶ ಏರ್ಪಡುತ್ತದೆ. ನಡುತಡಿಕೆಗಳು ಪ್ರಥಮ, ದ್ವಿತೀಯ ತೃತೀಯ ಮತ್ತು ಚತುರ್ಥ ತಂಡಗಳಲ್ಲಿ ಬೆಳೆಯಬಹುದು. ಆದರೆ ಪ್ರತಿ ತಂಡದಲ್ಲೂ ಕೇವಲ 6 ಜೊತೆಗಳಿದ್ದು ಅವುಗಳ ಗಾತ್ರ ಮತ್ತು ಉಗಮಕಾಲ ಒಂದೇ ಆಗಿರುತ್ತವೆ. ನೀಳ ಹಾಗೂ ವರ್ತುಳ ಸ್ನಾಯುಗಳಿಂದ ಕೂಡಿದ ನಡುತಡಿಕೆಗಳ ಗೋಡೆಗೆ ಅಂಟಿರುವ ಜನನೇಂದ್ರಿಯಗಳು ಸಂತಾನೋತ್ಪತ್ತಿಯಲ್ಲಿ ಪಾತ್ರವಹಿಸುತ್ತವೆ. ನಡುತಡಿಕೆಗಳ ಅಂಚಿನಲ್ಲಿರುವ ಅಂತ್ಯತಂತುಗಳು (ಅಕಾಂಟಿಯ) ದೇಹರಕ್ಷಣೆಯ ಕಾರ್ಯದಲ್ಲಿ ನೆರವಾಗುತ್ತವೆ.

ವಂಶಾಭಿವೃದ್ಧಿ

[ಬದಲಾಯಿಸಿ]
Venus flytrap sea anemone (Actinoscyphia) in the Gulf of Mexico

ಈ ಪ್ರಾಣಿಗಳಲ್ಲಿ ಲಿಂಗ ಮತ್ತು ನಿರ್ಲಿಂಗ ರೀತಿಯ ವಂಶಾಭಿವೃದ್ದಿಗಳೆರಡನ್ನೂ ಕಾಣಬಹುದು. ಅಂಡಾಣುಗಳ ಸಂಯೋಗದಿಂದ ಉತ್ಪತ್ತಿ ಯಾಗುವ ಮರಿ ಕಡಲ ಹೂ ತಾಯಿಯ ಬಾಯ ಮೂಲಕ ಹೊರಬಂದು, ಯಾವುದಾದರೂ ಆಧಾರಕ್ಕೆ ಅಂಟಿಕೊಂಡು ಸ್ವತಂತ್ರ ಜೀವಿಯಾಗಲು ತೊಡಗುತ್ತದೆ.

ಎಲ್ಲ ಕಡಲು ಹೂಗಳೂ ಮಾಂಸಾಹಾರಿಗಳು. ಕುಟುಕು ಕಣಗಳಿಂದ ಕೂಡಿದ ಕೋಡುಬಳ್ಳಿಗಳ ನೆರವಿನಿಂದ ತಾವಿದ್ದಲ್ಲಿಗೆ ಬಂದ ಇತರ ಪ್ರಾಣಿಗಳನ್ನು ಇವು ಕೊಂದು ತಿನ್ನುತ್ತವೆ. ಕೆಲವು ಕಡಲ ಹೂಗಳಲ್ಲಿ ದೇಹದಿಂದ ಸ್ರವಿಸಲ್ಪಟ್ಟ ಅಂಟುದ್ರವಕ್ಕೆ ಮರಳು, ಕಪ್ಪೆಚಿಪ್ಪು ಮುಂತಾದ ಅನ್ಯ ವಸ್ತುಗಳು ಅಂಟಿಕೊಂಡು ಬಹಿರ್ಕವಚವೊಂದು ನಿರ್ಮಾಣವಾಗುವುದುಂಟು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಡಲ_ಹೂ&oldid=1128259" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy